ಗುಡಿಸಲು ಭಸ್ಮ; ಅಲೆಮಾರಿ ಬದುಕು ‘ಅತಂತ್ರ’

ಸುದ್ದಿ ಬೆಳಕಿಂಡಿ |

ಸಂಗಮೇಶ ಮುಶಿಗೇರಿ..

ಕುಷ್ಟಗಿ: ಸ್ಟೇಷನರಿ ವಸ್ತು ಮಾರಾಟ ಮಾಡಿ ಬದುಕು ಸಾಗಿಸುತ್ತಿದ್ದ ಅಲೆಮಾರಿ ಸಮುದಾಯದ ಕುಟುಂಬವೊಂದು ವಾಸಿಸುತ್ತಿದ್ದ ಗುಡಿಸಲೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಭಸ್ಮವಾದ ಘಟನೆ ಮಂಗಳವಾರ ರಾತ್ರಿ 11ಕ್ಕೆ ಪಟ್ಟಣದಲ್ಲಿ ನಡೆದಿದೆ.

ಕೊಪ್ಪಳ ರಸ್ತೆ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಪಕ್ಕದ ಖಾಲಿ ಜಾಗೆಯಲ್ಲಿ ಈ ಘಟನೆ ಸಂಭವಿಸಿದೆ. ಯಲಬುರ್ಗಾ ತಾಲೂಕು ಲಿಂಗನಬಂಡಿ ಗ್ರಾಮದ ಅಲೆಮಾರಿ ಸಮುದಾಯದ ಮುಕಪ್ಪ ಚನ್ನದಾಸರ ಎಂಬುವರಿಗೆ ಸೇರಿದ ಗುಡಿಸಲು ಇದಾಗಿದೆ. ಗುಡಿಸಿಲಿನಲ್ಲಿ ಪತ್ನಿ ಈರಮ್ಮ ಹಾಗೂ ಮಕ್ಕಳೊಂದಿಗೆ ವಾಸಿಸುತಿದ್ದರು. ಮಂಗಳವಾರ ರಾತ್ರಿ ಮೇಣದ ಬತ್ತಿ ಬೆಳಕಿನಲ್ಲಿ ಮಲಗಿದಾಗ ರಾತ್ರಿ 11 ಗಂಟೆ ಸುಮಾರಿಗೆ ಮೇಣದ ಬತ್ತಿಯ ಬೆಂಕಿ, ಏಕಾಏಕಿ ಗುಡಿಸಲಿನ ಹೊದಿಕೆಗೆ ತಗುಲಿ ಬೆಂಕಿ ಹತ್ತಿಕೊಂಡಿದೆ. ಎಚ್ಚೆತ್ತ ಕುಟುಂಬ ಸದಸ್ಯರು, ಬೆಂಕಿಯಿಂದ ಪಾರಾಗಿದ್ದಾರೆ. ಅದೃಷ್ಟವಶಾತ್ ಯಾರಿಗೂ ಪ್ರಾಣಹಾನಿ ಸಂಭವಿಸಿಲ್ಲ ಎಂದು ಕುಟುಂಬ ತಿಳಿಸಿದೆ.

ಗುಡಿಸಲಿನಲ್ಲಿದ್ದ ಬೆಲೆ ಬಾಳುವ ಸ್ಟೇಷನರಿ ವಸ್ತುಗಳು, ಧವಸ ಧಾನ್ಯಗಳು, ದಾಖಲೆಗಳು ಜೊತೆಗೆ 20 ಸಾವಿರ ರೂಪಾಯಿ ನಗದು ಹಣ ಬೆಂಕಿ ಪಾಲಾಗಿದ್ದು, ಅದರಲ್ಲಿ ಐದಾರು ಸಾವಿರ ರೂಪಾಯಿ ಮಾತ್ರ ಬಚಾವ್ ಆಗಿವೆ. ನಮ್ಮ ಅಲೆಮಾರಿ ಬದುಕು, ಗುಡಿಸಲಿನ ಭಸ್ಮದಿಂದ ಅತಂತ್ರವಾಗಿದೆ ಎಂದು ಕುಟುಂಬ ಕಣ್ಣೀರು ಹಾಕಿದೆ. ಅಲೆಮಾರಿ ಸಮುದಾಯದ ಕುಟುಂಬಕ್ಕೆ ಸರಕಾರ ಸೂಕ್ತ ಪರಿಹಾರ ನೀಡಿ ಒಂದು ಸೂರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ನಾಗರಿಕರು ಒತ್ತಾಯಿಸಿದರು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದಿದ್ದಾರೆ.