Blog

ಈದ್ ಸಂಭ್ರಮ; ಮೆರವಣಿಗೆ, ರಕ್ತದಾನ, ರೋಗಿಗಳಿಗೆ ಹಾಲು-ಹಣ್ಣು

ಸುದ್ದಿ ಬೆಳಕಿಂಡಿ |

ಸಂಗಮೇಶ ಮುಶಿಗೇರಿ..

ಕುಷ್ಟಗಿ: ಪಟ್ಟಣದಲ್ಲಿ ಈದ ಮಿಲಾದ್ ಉ-ನಬಿ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ಮೆರವಣಿಗೆ, ರಕ್ತದಾನ ಶಿಬಿರ ಹಾಗೂ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು-ಬ್ರೆಡ್, ಹಣ್ಣು ವಿತರಣೆ ಕಾರ್ಯಕ್ರಮ ಹಮ್ಮಿಕೊಂಡು ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನವನ್ನು ಶುಕ್ರವಾರ ಸಂಭ್ರಮದಿಂದ ಆಚರಿಸಿದರು.

ಹಜರತ್ ಹೈದರ್ ಅಲಿ ಕಮೀಟಿ ಹಾಗೂ ಕೊಪ್ಪಳದ ಸಂಜೀವಿನಿ ರಕ್ತ ನಿಧಿ ಕೇಂದ್ರ ಇವರ ಸಹಯೋಗದಲ್ಲಿ ಪಟ್ಟಣದ ತೆಗ್ಗಿನ ಓಣಿಯ ಹಜರತ್ ಹೈದರ್ ಅಲಿ ವೃತ್ತದ ಬಳಿಯ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 05ನೇ ವರ್ಷದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಮದ್ದಾನಿ ಹಿರೇಮಠದ ಕರಿಬಸವ ಶ್ರೀಗಳ ಸಾನ್ನಿಧ್ಯ ಹಾಗೂ ತುಂಗಭದ್ರಾ ಕಾಡಾ ಅಧ್ಯಕ್ಷ ಹಸನಸಾಬ ದೋಟಿಹಾಳ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ವಿಧಾನಸಭಾ ವಿರೋಧ ಪಕ್ಷದ ಮುಖ್ಯ ಸಚೇತಕ, ಶಾಸಕ ದೊಡ್ಡನಗೌಡ ಪಾಟೀಲ್ ಅವರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ತೆಗ್ಗಿನ ಓಣಿಯ ಹಜರತ್ ಹೈದರ್ ಅಲಿ ಸಂಘಟನೆಯವರು ಪ್ರತಿವರ್ಷ ಪ್ರವಾದಿ ಮುಹಮ್ಮದ್ ಅವರ ಜನ್ಮದಿನದಂದು ತಮ್ಮ ಜಾತಿ, ಧರ್ಮಕ್ಕೆ ಸೀಮಿತವಾಗದೆ ಸರ್ವ ಧರ್ಮದವರನ್ನು ಒಳಗೊಂಡು ರಕ್ತದಾನ ಶಿಬಿರ ಸೇರಿದಂತೆ ವಿವಿಧ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿರುವುದು ಶ್ಲಾಘನೀಯ ಹಾಗೂ ಮಾದರಿಯಾಗಿದೆ. ಈ ಪರಂಪರೆ ಹೀಗೆ ಮುಂದುವರೆಯಲಿ. ತಮ್ಮ ಸಹಾಯ ಸಹಕಾರ ಸದಾ ಇರುತ್ತದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಸ್ಥಳೀಯ ಮದ್ಧಾನಿ ಹಿರೇಮಠದ ಪೀಠಾಧಿಪತಿ ಕರಿಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪೂರು ಅವರು ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜೀವನ ತತ್ವಾದರ್ಶಗಳ ಕುರಿತು ಮಾತನಾಡಿದರು.

ಪೈಗಂಬರ್ ಅವರ ಜೀವನ ಸಾಧನೆ ಕುರಿತು ಡಾ. ಜೀವನಸಾಬ ಬಿನ್ನಾಳ್ ಅವರು ವಿಶೇಷ ಉಪನ್ಯಾಸ ನೀಡಿದರು. ಇದೇವೇಳೆ ಕಳೆದ 30 ವರ್ಷದಿಂದ ಯಾವುದೇ ಪಲಾಪೇಕ್ಷೆ ಇಲ್ಲದೇ ದಫನ್ (ಶವ ಸಂಸ್ಕಾರ)ದಲ್ಲಿ ಸೇವೆ ಸಲ್ಲಿಸುತ್ತಿರುವ ಕುಟುಂಬಗಳ 10 ವ್ಯಕ್ತಿಗಳನ್ನು ಗೌರವಿಸಲಾಯಿತು.

ಪುರಸಭೆ ಅಧ್ಯಕ್ಷ ಮಹಾಂತೇಶ್ ಕಲಭಾವಿ, ಸದಸ್ಯರಾದ Gk ಹಿರೇಮಠ, ಸೈಯದ್ ಮೈನುದ್ದೀನ್ ಮುಲ್ಲಾ, ಮಹಿಬೂಬ ಕಮ್ಮಾರ್ ಸೇರಿದಂತೆ ಮುಖಂಡರಾದ ಖಾಜಾಸಾಬ ಅತ್ತಾರ, ಅಯೂಬ ಮುಲ್ಲಾ, ಅಹಮ್ಮದ ಹುಸೇನ ಆಧೋನಿ, ನಜೀರ್ ಸಾಬ ಮೂಲಿಮನಿ, ಉಮೇಶ್ ಮಂಗಳೂರು ಉಪಸ್ಥಿತರಿದ್ದರು.

ಅಫೀಸಾಬ ಅಹಮ್ಮದ್ ಹುಸೇನ್ ಅವರು ಪ್ರಾರ್ಥನೆ ಸಲ್ಲಿಸಿದರು. ಆರ್.ಟಿ ಸುಬಾನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಗಾಣಗೇರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ಬಳಿಕ ನಡೆದ ರಕ್ತದಾನ ಶಿಬಿರದಲ್ಲಿ ಕಾರ್ಯಕ್ರಮ ಆಯೋಜಕರು ಸೇರಿದಂತೆ ಒಟ್ಟು 222 ಜನ ರಕ್ತದಾನ ಮಾಡಿ ಗಮನಸೆಳೆದಿದ್ದಾರೆ ಎಂದು ಶಿಬಿರ ಆಯೋಜಕರು ಮಾಹಿತಿ ನೀಡಿದ್ದಾರೆ.

ಸ್ಥಳೀಯ ನಿವಾಸಿ ತಬಸುಮ್ ಎ ಮದಲಗಟ್ಟಿ ಪತಿ ಕಂದಾಯ ನಿರೀಕ್ಷಕ ಅಬ್ದುಲ್ ರಜಾಕ್ ಮದಲಗಟ್ಟಿ ದಂಪತಿ ಹಾಗೂ ಇನ್ನರ್ ವ್ಹೀಲ್ ಕ್ಲಬ್ ಇವರ ಸಹೋಗದಲ್ಲಿ ಇಲ್ಲಿಯ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಹಾಲು-ಹಣ್ಣು ವಿತರಿಸಿ ಪ್ರವಾದಿ ಮುಹಮ್ಮದ್ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಈ ಸಂದರ್ಭದಲ್ಲಿ ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಗಿರಿಜಾ ಪಾಟೀಲ್ ಹಾಗೂ ಸರ್ವ ಸದಸ್ಯರು ಮತ್ತು ನಿವೃತ್ತ ಶಿಕ್ಷಕರಾದ ಶಿವಪುತ್ರಪ್ಪ, ಮಲ್ಲಿಕಾರ್ಜುನ ಹಾಗೂ ಸೈಯದ್ ರಿಯಾಜ್ ಸೇರಿದಂತೆ ಜಮಾಅತೆ ಇಸ್ಲಾಂ ಇಂದ ಸದಸ್ಯರು ಇದ್ದರು.

ಇತ್ತ ಹೈದರಲಿ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಆಯೋಜಿಸಲಾಗಿತ್ತು.

ಅಂಜುಮನ್ ಪಂಚ್ ಕಮೀಟಿ ವತಿಯಿಂದ ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದಲ್ಲಿ ಮೆಕ್ಕಾ ಮದಿನ ಸ್ಥಬ್ಧ ಚಿತ್ರಗಳ ಮೆರವಣಿಗೆ ನಡೆಸಲಾಯಿತು. ಮುಸ್ಲಿಂ ಸಮಾಜದ ಯುವಕರು, ಚಿಣ್ಣರು, ವೃದ್ಧರು ಹೀಗೆ ಸರ್ವರೂ ಹೊಸ ಉಡುಪಿನೊಂದಿಗೆ ಕೈಯಲ್ಲಿ ಧಾರ್ಮಿಕ ಭಾವುಟ ಹಿಡಿದು ಯಾವುದೇ ಕರ್ಕಶ ಡಿಜೆ ಸೌಂಡ್’ಗೆ ಆಧ್ಯತೆ ನೀಡದೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಪ್ರವಾದಿ ಮಹ್ಮದ್ ಪೈಗಂಬರ್ ಅವರ ಸಂದೇಶಗಳ ಘೋಷಣೆ ಮೊಳಗಿಸಿ ಗಮನ ಸೆಳೆದರು.

ಒಟ್ಟಾರೆ ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಶ್ರದ್ಧೆ ಭಕ್ತಿ ಸಂಭ್ರಮದಿಂದ ಪ್ರವಾದಿ ಮುಹಮ್ಮದ್ ಫೈಗಂಬರ್ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.