Blog

ಮಾಜಿ ಸಚಿವ ಬಯ್ಯಾಪೂರ ಪುತ್ರನ ಕಾರು ಅಪಘಾತ; ಕೈ ಕಾರ್ಯಕರ್ತ ಸಾವು

ಸುದ್ದಿ ಬೆಳಕಿಂಡಿ |

ಸಂಗಮೇಶ ಮುಶಿಗೇರಿ..

ಕುಷ್ಟಗಿ: ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪೂರ ಅವರ ಪುತ್ರ ದೊಡ್ಡಬಸವ ಬಯ್ಯಾಪೂರ ಅವರು ಪ್ರಯಾಣಿಸುತ್ತಿದ್ದ ಕಾರು ಶುಕ್ರವಾರ ಅಪಘಾತಕ್ಕೀಡಾಗಿದೆ. ಅವರೊಂದಿಗಿದ್ದ ಪಟ್ಟಣದ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಸಾವಿಗೀಡಾಗಿದ್ದಾರೆ.

ಹಾಸನ ಜಿಲ್ಲೆಯ ಸಕಲೇಶಪುರ ಬಳಿ ಅಪಘಾತ ಘಟನೆ ಸಂಭವಿಸಿದೆ. ಪಟ್ಟಣದ ನಿವಾಸಿ ಶರಣಬಸವ ಪಂಪನಗೌಡ ಮಾಲಿಪಾಟೀಲ್ (30) ಸಾವಿಗೀಡಾದ ದುರ್ದೈವಿ ಎಂದು ಗುರುತಿಸಲಾಗಿದೆ.

ಜರ್ಮನಿಯಿಂದ ಆಗಮಿಸಿದ ಗೆಳೆಯನನ್ನು ಭೇಟಿಯಾಗಲು ದೊಡ್ಡಬಸವನಗೌಡ ಪಾಟೀಲ್ ಬಯ್ಯಾಪೂರ ಅವರು ತಮ್ಮ ಕಾರಿನಲ್ಲಿ ತಮ್ಮ ಪಕ್ಷದ ಕಾರ್ಯಕರ್ತ ಶರಣಬಸವ ಅವರನ್ನು ಜೊತೆಗೆ ಕರೆದುಕೊಂಡು ಹೋಗಿದ್ದರು. ಸಕಲೇಶಪುರ ಬಳಿಯ ಹೋಟೆಲ್ ಒಂದರಲ್ಲಿ ರಾತ್ರಿ ಊಟ ಸೇವಿಸಿ ಗೆಳೆಯನ ಮನೆಯತ್ತ ತೆರಳುತ್ತಿರುವ ಸಂದರ್ಭದಲ್ಲಿ ರಸ್ತೆ ಅಪಘಾತ ಸಂಭವಿಸಿದೆ. ಆ ವೇಳೆ ಕಾರಿನಲ್ಲಿದ್ದ ಬಲೂನ್ ತೆರೆದುಕೊಂಡಿದ್ದು, ಚಾಲಕ ಮತ್ತು ದೊಡ್ಡಬಸವನಗೌಡ ಪಾಟೀಲ್ ಬಯ್ಯಾಪೂರ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಹಿಂದೆ ಕುಳಿತಿದ್ದ ವ್ಯಕ್ತಿಯು ಸೇಪ್ಟಿ ಬೆಲ್ಟ್ ಬಳಸದ ಕಾರಣ ಒಳಪೆಟ್ಟಾಗಿದೆ. ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾದಾಗ ಬೆಳಗಿನ ಜಾವ ಶರಣಬಸವ ಮಾಲಿಪಾಟೀಲ್ ಅವರು ಸಾವನ್ನಪ್ಪಿದ್ದಾನೆ ಎಂದು ಬಲ್ಲಮೂಲಗಳಿಂದ ತಿಳಿದುಬಂದಿದೆ. ಆದರೆ, ಅಪಘಾತ ಹೇಗೆ ಸಂಭವಿಸಿದೆ ಎಂಬ ನಿಖರ ಮಾಹಿತಿ ಲಭ್ಯವಾಗಿಲ್ಲ.

ಕಾಂಗ್ರೆಸ್ ಕಾರ್ಯಕರ್ತನ ಅಕಾಲಿಕ ಸಾವಿಗೆ ಪಕ್ಷದ ಮುಖಂಡರು ಕಾರ್ಯಕರ್ತರು ಕಂಬನಿ ಮಿಡಿದಿದ್ದಾರೆ.