Blog

ಸಂಭ್ರಮದ ಲಿಂಗನಬಂಡಿ ಶ್ರೀ ದುರ್ಗಾದೇವಿಯ ಜಾತ್ರೆ ಸಂಪನ್ನ

ಸುದ್ದಿ ಬೆಳಕಿಂಡಿ |
ಶರಣು ಲಿಂಗನಬಂಡಿ..

ಯಲಬುರ್ಗಾ : ತಾಲೂಕಿನ ಲಿಂಗನಬಂಡಿ ಗ್ರಾಮದ ಚೆನ್ನದಾಸರ ಸಮುದಾಯದ ಆರಾಧ್ಯ ದೈವ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಮಂಗಳವಾರ ಸಂಭ್ರಮದಿಂದ ನಡೆಯಿತು.

ಗ್ರಾಮದ ಹೊರವಲಯ ನೆಲೆಸಿರುವ ಶ್ರೀ ದುಗ್ರಾದೇವಿಗೆ ಬೆಳಿಗ್ಗೆ ಅಭಿಷೇಕ, ಪುಷ್ಪಾಲಂಕಾರ, ಕುಂಕುಮಾರ್ಚನೆ, ಮಂಗಳಾರತಿ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.
ನಂತರ ಸಾಂಗವಾಗಿ ನಡೆದ ಧಾರ್ಮಿಕ ಪೂಜಾ ಕಾರ್ಯಕ್ರಮಗಳಲ್ಲಿ ತಾಲೂಕು ಸೇರಿದಂತೆ ಅಕ್ಕಪಕ್ಕದ ವಿವಿಧ ತಾಲೂಕು, ಗ್ರಾಮಗಳಿಂದ ಆಗಮಿಸಿದ್ದ ಚೆನ್ನದಾಸರ ಸಮುದಾಯದ ಪುರುಷರು, ಮಹಿಳೆಯರು, ಮಕ್ಕಳು ಕುಟುಂಬ ಸಮೇತ ಶ್ರದ್ಧಾ ಭಕ್ತಿ ಪೂರಕದಿಂದ ವಿವಿಧ ಹರಕೆಗಳನ್ನು ತೀರಿಸಿ ದೇವಿಯ ಕೃಪೆಗೆ ಪಾತ್ರರಾದರು.

ಮತ್ತೊಂದೆಡೆ ಸಮುದಾಯದ ಕಲಾವಿದರು ದೇವಿ ಸ್ತೋತ್ರ ಪಠಿಸಿದರೆ ಇನ್ನೂ ಕೆಲವರು ವಯಲಿನ್ ವಾದನ, ಹಾರ್ಮೋನಿಯಂ, ತಬಲಾ ಹೀಗೇ ವಿವಿಧ ಸಂಗೀತ ವಾದ್ಯಗಳೊಂದಿಗೆ ತತ್ವಪದ, ಭಕ್ತಿಗೀತೆ ಪ್ರಸ್ತುತ ಪಡಿಸಿ ಭಕ್ತಿ ಮೆರೆದರು.

ಈ ಕುರಿತು ಚನ್ನದಾಸರ ಸಮುದಾಯದ ಬಯಲಾಟ ನಾಟಕ ಅಕಾಡೇಮಿ ಗೌರವ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ತಿಮ್ಮಣ್ಣ ಮಾಸ್ತಾರ ಅವರು ಮಾತನಾಡಿ, ಗ್ರಾಮದ ಹೊರವಲಯ ನೆಲೆಸಿರುವ ನಮ್ಮ ಸಮುದಾಯದ ಆರಾಧ್ಯ ದೈವತೆ ಶ್ರೀ ದುಗ್ರಾದೇವಿಗೆ ಪೂರ್ವಿಕರಿಂದಲೂ ಪೂಜೆ ಪುನಸ್ಕಾರಗಳೊಂದಿಗೆ ಪ್ರತಿ ವರ್ಷ ಶ್ರದ್ಧಾ ಭಕ್ತಿಯಿಂದ ಜಾತ್ರೆ ಆಚರಿಸುತ್ತಾ ಬರುತಿದ್ದೇವೆ. ದೇವತೆ ನಮಗಷ್ಟೇ ಅಲ್ಲದೆ ನಂಬಿ ಬಂದ ಭಕ್ತರು ಸಂಕಲ್ಪ ಕಟ್ಟಿಕೊಂಡರೆ ಅವರಿಗೆ ಆಯುರಾರೋಗ್ಯ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ ಎಝಬ ಬಲವಾದ ನಂಬಿಕೆಯಿದೆ. ಈ ದಿನ ನಮ್ಮ ತಾಲೂಕು ಸೇರಿದಂತೆ ಬೇರೆ ಬೇರೆ ಜಿಲ್ಲೆ, ತಾಲೂಕುಗಳಲ್ಲಿ ನೆಲೆಸಿರುವ ನಮ್ಮ ಸಮುದಾಯದವರು ಈ ಜಾತ್ರೆಯಲ್ಲಿ ಭಾಗಿಯಾಗಿ ಅಮ್ಮನ ಕೃಪೆಗೆ ಪಾತ್ರರಾಗುತ್ತಾರೆ ಎಂದರು.

ಶ್ರೀ ದುರ್ಗಾದೇವಿಯ ಮುಖ್ಯ ಅರ್ಚಕರಾದ ಶರಣಪ್ಪ ದಾಸರ ಹಾಗೂ ಅವರ ಕುಟುಂಬಸ್ಥರು ಸೇರಿದಂತೆ ಸಮುದಾಯದ ಮುಖಂಡರಾದ ಪತ್ರಕರ್ತ ಮರಿಸ್ವಾಮಿ ಚನ್ನದಾಸರ, ಗೋಪಾಲ ಚನ್ನದಾಸರ, ಆಕಾಶವಾಣಿ ಕಲಾವಿದ ಡಿ.ಹನುಮಂತ ಕುಮಾರ್ ಲಿಂಗನಬಂಡಿ, ಯಲ್ಲಪ್ಪ ದಾಸರ, ಡಿ,ಶಾಂತಾನಂದ ಗವಾಯಿಗಳು, ಡಿ.ಮೌನೇಶ ಕುಮಾರ್ ಲಿಂಗನಬಂಡಿ
ಇತರರು ಶ್ರೀ ದೇವಿಯ ಆರಾಧನೆಯಲ್ಲಿ ಪಾಲ್ಗೊಂಡಿದ್ದರು.