– ಬಹಿರಂಗ ಜಗಳಕ್ಕಿಳಿದ ಅಂಡಗಿ-ನಿಂಗೋಜಿ..! ವಿಚಲಿತಗೊಂಡ ನಾಡೋಜ ಜೋಷಿ..!!

 

 

 

 – ಸಂಗಮೇಶ ಮುಶಿಗೇರಿ.

ಕೊಪ್ಷಳ (ಕುಷ್ಟಗಿ) : ರಾಜ್ಯ ಹಾಗೂ ಕೊಪ್ಪಳ ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನದ ಚುನಾವಣೆ ಪ್ರಚಾರ ಯಾತ್ರೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳಾದ ವೀರಪ್ಪ ನಿಂಗೋಜಿ ಹಾಗೂ ಹನುಮಂತಪ್ಪ ಅಂಡಗಿ ನಡುವೆ ಬಹಿರಂಗ ಜಗಳವಾಗಿದ್ದು, ಇಬ್ಬರು ಬೆಂಬಲಿಗರ ನಡುವೆ ರಾಜ್ಯಾಧ್ಯಕ್ಷ ಸ್ಥಾನದ ಸೇವಾಕಾಂಕ್ಷಿ ನಾಡೋಜ ಮಹೇಶ ಜೋಷಿ ವಿಚಲಿತಗೊಂಡ ಘಟನೆ ಪಟ್ಟಣದಲ್ಲಿ ಮಂಗಳವಾರ ನಡೆಯಿತು..!
  ೨೧-೧೧-೨೦೨೧ ರವಿವಾರದಂದು ನಡೆಯುವ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನದ ಸೇವಾಕಾಂಕ್ಷಿಗಳಾದ ನಾಡೋಜ ಡಾ. ಮಹೇಶ್ ಜೋಶಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸ್ಥಾನದ ಸೇವಾಕಾಂಕ್ಷಿಗಳಾದ ವೀರಪ್ಪ ನಿಂಗೊಜಿ ಅವರನ್ನು ಬೆಂಬಲಿಸಿ ವಿಜಯಶಾಲಿಗಳಾಗಲಿ ಎಂದು ಮಂಗಳವಾರ ದಿನ ಚಿಕ್ಕವಂಕಲಕುಂಟಾ ಶ್ರೀ ಮಾರುತೇಶ್ವರ ದೇವಸ್ಥಾನದಿಂದ ಕುಷ್ಟಗಿಯ ಶ್ರೀ ಮದ್ಧಾನೇಶ್ವರ ಹಿರೇಮಠದವರೆಗೆ ಕ.ಸಾ.ಪ ಚುನಾವಣಾ ಪ್ರಚಾರ ಸಮಿತಿ ರಾಜ್ಯ ಸಂಘಟನಾ ಕಾರ್ಯದರ್ಶಿ ನಬಿಸಾಬ ಕುಷ್ಟಗಿ ಇವರಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಈ ಪಾದಯಾತ್ರೆಗೆ ಚಾಲನೆ ನೀಡಲು ಹಾಗೂ ತಮ್ಮ ಮತ್ತು ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಪರ ಪ್ರಚಾರಕ್ಕಾಗಿ ರಾಜ್ಯ ಅಧ್ಯಕ್ಷ ಸ್ಥಾನದ ಸೇವಾಕಾಂಕ್ಷಿ ನಾಡೋಜ ಮಹೇಶ್ ಜೋಷಿ ಆಗಮಿಸಿದ್ದರು. ಇವರನ್ನು ಬೆಂಬಲಿಸಲು ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಅವರು ಕರಪತ್ರಗಳನ್ನು ಹಿಡಿದು ಆಗಮಿಸಿದ್ದರು. ಇದನ್ನು ಗಮನಿಸಿದ ಇನ್ನೊಬ್ಬ ಅಭ್ಯರ್ಥಿ ವೀರಪ್ಪ ನಿಂಗೋಜಿ ಅವರು ಖ್ಯಾತೆ ತೆಗೆದರು. ಈ ವೇಳೆ ಸ್ಥಳದಲ್ಲಿ ಸೇರಿದ್ದ ಆಜೀವ ಸದಸ್ಯರಲ್ಲಿ ರಾಜ್ಯಾಧ್ಯಕ್ಷ ಸ್ಥಾನದ ಸೇವಾಕಾಂಕ್ಷಿ ಮಹೇಶ್ ಜೋಷಿ ಅವರು ಈ ಇಬ್ಬರು ಜಿಲ್ಲಾಭ್ಯರ್ಥಿಗಳಲ್ಲಿ ಯಾರ ಪರ ಪ್ರಚಾರ ಕೈಗೊಳ್ಳುತ್ತಾರೆ ಎಂಬ ಗೊಂದಲ ಸೃಷ್ಠಿಯಾಗಿತ್ತು. ಈ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಭ್ಯರ್ಥಿ ಹನುಮಂತಪ್ಪ ಅಂಡಗಿ, ನಾಡೋಜ ಮಹೇಶ ಜೋಷಿ ಅವರು ಕಸಾಪ ರಾಜ್ಯಾಧ್ಯಕ್ಷರಾಗಿ ಆಯ್ಕೆ ಆಗಲಿ ಎಂದು ಅವರ ಪರ ಪ್ರಚಾರ ಕೈಗೊಂಡಿದ್ದೇನೆ. ಅವರಿಂದ ಯಾವುದೇ ರೀತಿಯ ಹಣದ ಸಹಾಯ ಪಡೆಯದೆ ವಯಕ್ತಿಕ ಅರವತ್ತು ಸಾವಿರ ರೂ.ವ್ಯಯಿಸಿ ಕರಪತ್ರ ಛಾಪಿಸಿ ಹಂಚುತಿದ್ದೇನೆ. ಜಿಲ್ಲೆಯಲ್ಲಿ ಎಂಟು ಸಾವಿರ ಆಜೀವ ಸದಸ್ಯರಿದ್ದು ಜಿಲ್ಲೆಯಾದ್ಯಂತ ಒಬ್ಬಂಟಿಯಾಗಿ ಸಂಚರಿಸಿ ಅವರ ಪರ ಪ್ರಚಾರ ಕೈಗೊಂಡಿದ್ದೇನೆ. ಮಹೇಶ ಜೋಷಿ ಅವರು ತಮಗೆ ಬೆಂಬಲಿಸುವುದಿಲ್ಲ ಎಂದರೆ ಈ ಕ್ಷಣದಲ್ಲೇ ಕರ ಪತ್ರ ಹರಿದು ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಬೇರೆ ಅಭ್ಯರ್ಥಿ ಪರ ಪ್ರಚಾರ ಮಾಡಲು ಮುಂದಾಗುತ್ತೇನೆ ಎಂದು ತಿಳಿಸಿದರು. ಪಾದಯಾತ್ರಿ ನಬಿಸಾಬ ಕುಷ್ಟಗಿ ಅವರು ಪ್ರವೇಶಿಸಿ ಅಂಡಗಿ ಅವರ ನಡೆಯನ್ನು ವಿರೋಧಿಸಿದರು. ಈ ಪ್ರಚಾರ ಪಾದಯಾತ್ರೆಯನ್ನು ಮಹೇಶ ಜೋಷಿ ಹಾಗೂ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ವೀರಪ್ಪ ನಿಂಗೋಜಿ ಪರ ಹಮ್ಮಿಕೊಳ್ಳಲಾಗಿದೆ. ತಾವು ಇದರಲ್ಲಿ ಭಾಗವಹಿಸಿ ಗೊಂದಲ ಸೃಷ್ಠಿ ಮಾಡಬಾರದು ಎಂದು ತಕರಾರು ತೆಗೆದರು. ಇದಕ್ಕೆ ವೀರಪ್ಪ ನಿಂಗೋಜಿ ಅವರು ಧ್ವನಿಗೂಡಿಸಿದರು. ಇದಕ್ಕೆ ಒಪ್ಪದ ಹನುಮಂತಪ್ಪ ಅಂಡಗಿ, ಮಹೇಶ ಜೋಷಿ ಅವರನ್ನು ಬೆಂಬಲಿಸಲು ಆಗಮಿಸಿದ್ದೇನೆ. ಮೂರು ತಿಂಗಳು ಗಳಿಂದ ನನ್ನನ್ನು ಹಾಗೂ ಮಹೇಶ ಜೋಷಿ ಅವರಿಗೆ ಮತ ನೀಡುವಂತೆ ಆಜೀವ ಸದಸ್ಯರಲ್ಲಿ ಮನವಿ ಮಾಡುತ್ತಿರುವೆ. ಇದನ್ನು ತಡೆಯಲು ಮಹೇಶ ಜೋಷಿ ಅವರು ಹೇಳಲಿ. ತಮ್ಮನ್ನು ತಡೆಯಲು ನೀವ್ಯಾರು ಎಂದು ಪ್ರಶ್ನಿಸಿದರು. ನಂತರ ಮಹೇಶ ಜೋಷಿ ಅವರು ಮಧ್ಯೆ ಪ್ರವೇಶಿಸಿ, ಕೊಪ್ಪಳ ಜಿಲ್ಲೆಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಮೂವರು ಅಭ್ಯರ್ಥಿಗಳು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಲು ತಮ್ಮನ್ನು ಬೆಂಬಲಿಸುತ್ತಿದ್ದಾರೆ ಅವರನ್ನು ಗೌರವಿಸುತ್ತೇನೆ. 21ನೇ ತಾರೀಖು ಭಾನುವಾರ ಚುನಾವಣೆ ಮುಗಿದ ಬಳಿಕ ನಾನು ಅಲ್ಲಿ ಕುಳಿತಿರುತ್ತೇನೆ. ನೀವು ಜಿಲ್ಲೆಯಲ್ಲಿ ಇರುವವರು ಮತ್ತೆ ಇಬ್ಬರು ಒಂದಾಗುತ್ತೀರಾ. ಸುಮ್ಮನೆ ಇಬ್ಬರ ನಡುವೆ ಜಗಳ ಬೇಡ ಎಲ್ಲರು ಒಂದಾಗಿ ಇರೋಣ. ಇದರಿಂದ ಮತದಾರರಲ್ಲಿ ಗೊಂದಲ ವಾತಾವರಣ ನಿರ್ಮಾಣ ಆಗುವುದು ಬೇಡ ಎಂದು ಮನವಿ ಮಾಡಿದರು. ಇದನ್ನು ಒಪ್ಪದ ಕ.ಸಾ.ಪ ಚುನಾವಣಾ ಪ್ರಚಾರ ಸಮಿತಿ ರಾಜ್ಯ ಸಂಘಟನಾ ಕಾರ್ಯದರ್ಶಿ ನಬಿಸಾಬ ಕುಷ್ಟಗಿ, ವೀರಪ್ಪ ನಿಂಗೋಜಿನೇ ಜಿಲ್ಲಾ ಅಭ್ಯರ್ಥಿ ಎಂದು ಘೋಷಿಸಬೇಕು ಎಂದು ಮಹೇಶ ಜೋಷಿ ಅವರಲ್ಲಿ ಪಟ್ಟು ಹಿಡಿದರು. ಈ ಘಟನೆಯಿಂದ ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ ಮಹೇಶ ಜೋಷಿ ವಿಚಲಿತಗೊಂಡರು. ಜಿಲ್ಲಾಭ್ಯರ್ಥಿಗಳ ಹಾಗೂ ಅಭಿಮಾನಿಗಳ ಪರ ವಿರೋಧದ ತಿಕ್ಕಾಟದಲ್ಲೇ ಪ್ರಚಾರ ಯಾತ್ರೆ ಆರಂಭಗೊಂಡಿತು. ಈ ಯಾತ್ರೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್, ಪುರಸಭೆ ಅಧ್ಯಕ್ಷ ಜಿಕೆ ಹಿರೇಮಠ, ಕೆ.ಮಹೇಶ, ಬಿಜೆಪಿ ಕುಷ್ಟಗಿ ಮಂಡಲ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ವಡಿಗೇರಿ, ಉಪಾಧ್ಯಕ್ಷ ಅಮರೇಗೌಡ ಪಾಟೀಲ್ ಜಾಲಿಹಾಳ, ಕಲಾವಿದ ಶರಣಪ್ಪ ವಡಿಗೇರಿ, ಶಿವಾಜಿ ಹಡಪದ ಮತ್ತಿತರೆ ಮಹೇಶ ಜೋಷಿ ಬೆಂಬಲಿಗರು ಭಾಗವಹಿಸಿದ್ದರು.