ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : 68-07 ಎಕರೆ ಗಾಯರಾಣ ಜಮೀನು ಖರೀದಿಗೆ ವಿರೋಧಿಸಿ ನ್ಯಾಯಾಲಯದ ತಡೆಯಾಜ್ಞೆ ತರುವಲ್ಲಿ ಜಿಲ್ಲೆಯ ಕುಷ್ಟಗಿ ತಾಲೂಕಿನ ಜಾಗೀರ ಗುಡದೂರು ಗ್ರಾಮಸ್ಥರು ಯಶಸ್ವಿಯಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ..!
ಹನುಮನಾಳ ಕಂದಾಯ ಹೋಬಳಿಯ ಜಾಗೀರ ಗುಡದೂರು ಗ್ರಾಮದ ಸರ್ವೇ ನಂಬರ್ 58/1/* ರ 13-26 ಎಕರೆ, ಸ.ನಂ 58/2/* ರ 26-30 ಎಕರೆ ಹಾಗೂ 58/3/* ರ 27-31 ಎಕರೆ ಸೇರಿದಂತೆ ಒಟ್ಟು 68-07 ಎಕರೆ ಜಮೀನು ಚಾಲ್ತಿ ಪಹಣಿಯಲ್ಲಿ ಗೀತಾಬಾಯಿ ಗೋವಿಂದಾಚಾರ್ಯ ಕೊಳ್ಳಿ ಎಂದು ಪಟ್ಟಾದಾರನ ಹೆಸರಿನಲ್ಲಿದೆ. ಆದರೆ, 1988 ರಿಂದ 1993 ರವರೆಗಿನ ಪಹಣಿ ಕಾಲಂ 12 ರಲ್ಲಿ “ಗಾಯರಾಣ” ಎಂದು ನಮೂದಾಗಿದೆ.
ಸ.ನಂ 58 ರ ಒಟ್ಟು 68-07 ಎಕರೆ ಜಮೀನಿನ ಕುರಿತು ಜಾಗೀರ ಗುಡದೂರು ಗ್ರಾಮಸ್ಥರು ಹೇಳಿದಿಷ್ಟು , ಜಾಗೀರ ಗುಡದೂರ, ಪರಮನಟ್ಟಿ, ಕೋನಾಪುರ ಸೇರಿದಂತೆ ಗುಡ್ಡದ ದೇವಲಾಪೂರ ಗ್ರಾಮಗಳ ಜಾನುವಾರುಗಳಿಗಾಗಿ ಪೂರ್ವಿ ಮೀಸಲಾಗಿದ್ದ ಗಾಯರಾಣ, ಗೋಮಾಳ ಮತ್ತು ಅರಣ್ಯ ಜಮೀನಾಗಿದೆ. ಆದರೆ, ಕಂದಾಯ ಇಲಾಖೆಯಲ್ಲಿ ಸಹಾಯಕನಾಗಿ ಕಾರ್ಯನಿರ್ವವಹಿಸುತ್ತಿದ್ದ ವ್ಯಕ್ತಿ ತನ್ನ ಹೆಸರಿಗೆ ಒಟ್ಟು ಜಮೀನನ್ನು 1973 ರಲ್ಲಿ ವರ್ಗಾಯಿಸಿಕೊಂಡಿದ್ದಾನೆ. ಆದರೆ, ಜಮೀನು ವರ್ಗಾವಣೆಗೊಂಡಿರುವ ಬಗ್ಗೆ ಯಾವುದೇ ದಾಖಲೆಗಳು ಇಲಾಖೆಯಲ್ಲಿ ಲಭ್ಯವಾಗುತ್ತಿಲ್ಲ. ವರ್ಗಮುಬಾದಿಲ್ ಪುಸ್ತಕದಲ್ಲಿ ದಾಖಲಾದ ಅನುಕ್ರಮ ಸಂಖ್ಯೆ ಇತ್ಯಾದಿ ಮಾಹಿತಿ ಪಹಣಿಯಲ್ಲಿ ನಮೂದಿಲ್ಲ. ಪೂರ್ವ ಕಾಲದಿಂದಲೂ 68-07 ಜಮೀನು ಸಾರ್ವಜನಿಕ ಆಸ್ತಿಯಾಗಿದೆ. ಯಾವುದೇ ದಾಖಲಾತಿಗಳು ಇಲ್ಲದ ಜಮೀನನ್ನು ಪಟ್ಟಾ ಕಾಲಂನಲ್ಲಿರುವ ವ್ಯಕ್ತಿ ಮಾರಾಟಕ್ಕೆ ಮುಂದಾಗಿದ್ದಾರೆ. ಈಗಾಗಲೇ ಸುಳ್ಳು ಮಾಹಿತಿ ನೀಡುವ ಮೂಲಕ ಜಮೀನನ್ನು ಬೆಳಗಾವಿ ಮೂಲದವರಿಗೆ ದಿನಾಂಕ 19-01-2022 ರಂದು ದಕ್ ಖರೀದಿ ಆಗಿದೆ. ಆದರೆ, ದಿನಾಂಕ 17-01-2022 ರಂದು ಧಾರವಾಡ ಹೈಕೋರ್ಟ್ ಸಂಚಾರಿ ಪೀಠದಿಂದ ಜಮೀನು ಮಾರಾಟ ಮಾಡದಂತೆ ಗ್ರಾಮಸ್ಥರು ತಡೆಯಾಜ್ಞೆ ಆದೇಶ ತಂದಿದ್ದಾರೆ. ಸಂಪೂರ್ಣ ಅರಣ್ಯದಿಂದ ಕೂಡಿದ ಜಮೀನನ್ನು ಸಾಗುವಳಿ ಜಮೀನು ಎಂದು ಕಾಗದ ಪತ್ರಗಳನ್ನು ಸೃಷ್ಟಿಸಿ ಖರೀದಿಗೆ ಮುಂದಾಗಲಾಗಿದೆ. ಜಮೀನು ಖರೀದಿ ಆಗಿರುವುದು ರದ್ದಾಗಬೇಕು. ಗಾಯರಾಣ ಜಮೀನಾಗಿ ಗ್ರಾಮದ ಹೆಸರಿನಲ್ಲಿ ಮೀಸಲಿರಬೇಕೆಂದು ತಡೆಯಾಜ್ಞೆ ತಂದಿರುವ ಯಲ್ಲಪ್ಪ ಗದ್ದಿ ಸೇರಿದಂತೆ ಜಾಗೀರ ಗುಡದೂರು ಗ್ರಾಮಸ್ಥರ ಒತ್ತಾಯವಾಗಿದೆ..!!