ಮುಂಗಾರು ಹಿನ್ನಡೆ ಸಾಧ್ಯತೆ..!?

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಕಳೆದ ವರ್ಷಕ್ಕೆ ಹೋಲಿಸಿದರೆ, ಜಿಲ್ಲೆ ಸೇರಿದಂತೆ ಈ ಭಾಗದ ಬಹುತೇಕ ಪ್ರದೇಶಗಳಲ್ಲಿ ಈ ವರ್ಷದ ಮುಂಗಾರು ಹಂಗಾಮು ಹಿನ್ನಡೆಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ..!

‘ಕೃತಿಕಾ ಮಳೆ’ ವಾಡಿಕೆಯಂತೆ ಈ ಸಮಯಕ್ಕಾಗಲೇ ಸುರಿದು, ಜಮೀನು ಹದಗೊಳಿಸುವ ಕಾರ್ಯ ಪೂರ್ಣಗೊಂಡು, ಬಿತ್ತನೆಗೆ ಅತ್ಯಂತ ಶ್ರೇಷ್ಠ  “ರೋಹಿಣಿ” ಬೀಜ ಮಳೆಯನ್ನು ರೈತರು ಎದರು ನೋಡುತ್ತಿದ್ದರು. ಈ ಕಾರ್ಯ ವಾಡಿಕೆ ಕೂಡಾ ಹೌದಾಗಿದೆ. ಆದರೆ, ವಾಡಿಕೆಯಂತೆ ಈ ವರ್ಷದ ಮುಂಗಾರು ಹಾಗಾಗಲಿಲ್ಲ. ಕೃತಿಕಾ ಮಳೆಯ ಕೊನೆಯ ಪಾದದ ಆರಂಭದ ದಿನಗಳಲ್ಲಿ ಅತಿರೇಕವಾಗಿ ಏನೋ ಮಳೆ ಸುರಿಯಿತು. ಅದು ಮಾತ್ರ ಈಗಾಗಲೇ ಜಮೀನು ಹದಗೊಳಿಸಿದ ಕೆಲವೇ ಕೆಲ ರೈತರಿಗೆ ಪ್ರಯೋಜನಕ್ಕೆ ಬಂದಿತು. ದಿನಾಂಕ 19-05-2022 ಹಾಗೂ 20-05-2022 ರಂದು ಹಾಗೂ ಅದರ ಹಿಂದೆ ಮುಂದೆ ಸುರಿದ ಬಾರಿ ಪ್ರಮಾಣದ ಮಳೆ ಮಾತ್ರ ಜಮೀನು ಹದಗೊಳಿಸಲಿಕ್ಕೆ ಸೀಮಿತವಾಗಿತು. ಅಕಾಲಿಕ ಮಳೆಯಿಂದ ಬಹುತೇಕ ಜಮೀನುಗಳನ್ನ ಬಿತ್ತನೆಗೆ ಸಜ್ಜುಗೊಳಿಸಿದ್ದಾಗಿದೆ.

ಹೆಸರಿಗೆ ಹಿನ್ನಡೆ : ಹೆಸರು ಬೆಳೆಯ ಬಿತ್ತನೆ ಕಾರ್ಯ ಪೂರ್ಣಗೊಂಡು, ರೋಹಿಣಿ ಮಳೆಗಾಗಲೇ ಹೆಸರು ಬೆಳೆ ಅರ್ಧ ಅಡಿಯಷ್ಟು ಭೂಮಿ ಬಿಟ್ಟು ಎತ್ತರ ಬೆಳೆದಿರಬಹುದಾಗಿತ್ತು. ಆದರೆ, ಇತ್ತೀಚಿಗೆ ಸುರಿದ ಮಳೆಗೆ ಶೇ.10 ರಷ್ಟು ಮಾತ್ರ ಹೆಸರು ಬಿತ್ತನೆಯಾಗಿದೆ ಎಂಬ ಮಾತುಗಳು ರೈತಾಪಿ ವಲಯದಲ್ಲಿ ಕೇಳಿ ಬರುತ್ತಿವೆ. ಇದರಿಂದ ಈ ವರ್ಷದಲ್ಲಿ ಹೆಸರು ಬೆಳೆಗೆ ಹಿನ್ನಡೆಯಾಗುವ ಬಹುತೇಕ ಲಕ್ಷಣಗಳು ಸ್ಪಷ್ಟವಾಗುತ್ತಿವೆ.

ಮೊದಲ ಪಾದ ಕಳೆದ ರೋಹಿಣಿ : ದಿನಾಂಕ 25-05-2022 ರಂದು ಕೂಡಿಕೊಂಡಿರುವ ರೋಹಿಣಿ ಮಳೆ ಈಗಾಗಲೇ ಮೊದಲ ಪಾದ ಕಳೆದಿದ್ದಾಗಿದೆ. ಈ ವರ್ಷದಲ್ಲಿ ಮುಂಗಾರು ಬಿತ್ತನೆಗೆ ಸಾಕಷ್ಟು ವ್ಯತ್ಯಾಸ ಕಂಡು ಬರುವ ಎಲ್ಲಾ ಲಕ್ಷಣಗಳಿವೆ. ಬಿತ್ತನೆಗೆ ಶ್ರೇಷ್ಠವಾದ ರೋಹಿಣಿ (ತಥಿ) ಸಮಯ ಮಾತ್ರ ರಣ ಬಿಸಿಲಿನಲ್ಲಿಯೇ ಕಳೆಯುತ್ತಿರುವ ವಾತಾವರಣ ಕಂಡ ರೈತರಂತು ವಿಚಲಿತರಾಗಿದಂತು ಸತ್ಯ. ಮಳೆ ಆಶ್ರಿತ ರೈತರು ರಣ ಬಿಸಿಲಿನ ಮಧ್ಯದಲ್ಲಿ ‘ಮುಂಗಾರು’ ಮಳೆಯ ಅದರಲ್ಲೂ ‘ರೋಹಿಣಿ’ ಮಳೆಯ ಹನಿಗಳ ಲೀಲೆಯನ್ನು ಕಾದು ನೋಡುತ್ತಿದ್ದಾರೆ..!!

#  ಈ ವರ್ಷದ ಮುಂಗಾರು ಹಿನ್ನಡೆಯಾಗುವ ಅನಿಶ್ಚಿತತೆ ಎದುರಾಗಿದೆ. ರೈತ ಸಮೂಹ ಆತಂಕದಲ್ಲಿದೆ.

# #   ಮಲ್ಲಿಕಾರ್ಜುನ ಗಡಗಿ, ತಳಕಲ್, ಗ್ರಾಮದ ಪ್ರಗತಿಪರ ರೈತ.