ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಜಿಲ್ಲೆಗೆ ಆಗಮಿಸಿದ್ದರು. ಆದರೆ, ಮುಖ್ಯಮಂತ್ರಿಗಳನ್ನು ಖುದ್ದು ಸ್ವಾಗತಿಸುವ ಮೂಲಕ ಆದರದ ಆತಿಥ್ಯ ನೀಡಬೇಕಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಮಾತ್ರ ಏಲ್ಲಿಯೂ ಕಾಣಿಸಲಿಲ್ಲದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತು..!?
ಎರಡು ದಿನಗಳ ಹಿಂದೆ ಅಷ್ಟೇ, ಸಚಿವ ಆನಂದ ಸಿಂಗ್ ಅವರಿಗೆ ತವರು ವಿಜಯನಗರ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡಿ, ಆದೇಶ ಹೊರಡಿಸಿದ್ದನ್ನು ಕೇವಲ 24 ಗಂಟೆಗಳೊಳಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮರು ಆದೇಶ ಮಾಡಿದ್ದೇ ಆನಂದ ಸಿಂಗ್ ಸಿಎಂ ಅವರ ಜೊತೆಗೆ ಮುನಿಸಿಕೊಳ್ಳಲು ಮತ್ತು ಕೊಪ್ಪಳದ ತಾಲೂಕಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಸಿಎಂ ಅವರ ಜೊತೆಗೆ ವೇದಿಕೆ ಹಂಚಿಕೊಳ್ಳದೇ ದೂರ ಉಳಿಯಲು ಮುಖ್ಯ ಕಾರಣವೆಂದು ಬಿಜೆಪಿ ಚಾವಡಿಯಲ್ಲಿನ ಪ್ರಮುಖ ವಿಶ್ಲೇಷಣೆ. ಇಡೀ ಸಚಿವ ಸಂಪುಟದಲ್ಲಿಯೇ ಡೈನಾಮಿಕ್ ಎಂತಲೇ ಕರೆಯಿಸಿಕೊಳ್ಳುವ ಪರಿಸರ ಖಾತೆ ಸಚಿವ ಆನಂದ ಸಿಂಗ್ ಅವರ ಅನುಪಸ್ಥಿತಿ ಮಾತ್ರ ಸಿಎಂ ಕಾರ್ಯಕ್ರಮದಲ್ಲಿ ಬಹಳಷ್ಟು ಎದ್ದು ಕಾಣುತ್ತಿತ್ತು. ಸಾಕಷ್ಟು ಕ್ರಿಯಾಶೀಲತೆಗೆ ಹೆಸರಾಗಿರುವ ಸಚಿವ ಆನಂದ ಸಿಂಗ್ ಅವರ ಅನುಪಸ್ಥಿತಿ ಮಾತ್ರ ಇಡೀ ಕಾರ್ಯಕ್ರಮ ಪೂರ್ಣಗೊಳ್ಳುವವರೆಗೂ ಎಲ್ಲಿಯೂ ಚರ್ಚೆಗೆ ಬಾರಲಿಲ್ಲ. ಸಿಂಗ್ ಅವರ ಅನುಪಸ್ಥಿತಿ ತುಂಬಲು ಸಚಿವರೊಬ್ಬರು ಪ್ರಯತ್ನಿಸಿದರು. ಆದರೆ, ಇದನ್ನು ಸೂಕ್ಷ್ಮವಾಗಿ ಗಮನಿಸಿದ ಜಿಲ್ಲೆಗರು ಆನಂದ ಸಿಂಗ್ ಅವರಿಗೆ ‘ಆನಂದ ಸಿಂಗ್’ ಅವರೇ ಸಾಟಿ.. ಮತ್ತಾರು ಸಾಧ್ಯವಿಲ್ಲವೆಂಬ ಮಾತುಗಳು ಕೂಡಾ ವೇದಿಕೆ ಮುಂಭಾಗದಲ್ಲಿ ಕೇಳಿಬಂದವು. ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಮೇಲೆ ಪ್ರಪ್ರಥಮವಾಗಿ ಕೊಪ್ಪಳ ಜಿಲ್ಲೆಗೆ ಆಗಮಿಸಿದ ಬಸವರಾಜ ಬೊಮ್ಮಾಯಿ ಅವರ ಮೊಗದಲ್ಲಿ ‘ಆನಂದ’ ಮಾತ್ರ ಕಾಣಿಸಲಿಲ್ಲ..!!