ಜೆ.ಹೆಚ್ ಪಟೇಲರ ಬದಲಾಗಿ ಯುವಕನೊಬ್ಬ ರಾಷ್ಟ್ರ ಧ್ವಜ ಹಾರಿಸಿದ್ದ..!

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಅಂದು (24-08-1997) ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಹೆಚ್.ಪಟೇಲರು ನೂತನ “ಕೊಪ್ಪಳ” ಜಿಲ್ಲೆಯನ್ನು ರಾಷ್ಟ್ರ ಧ್ವಜಾರೋಹಣ ಕೈಗೊಳ್ಳುವ ಮೂಲಕ ಘೋಷಣೆ ಮಾಡುವ ಸಮಯವದು. ಇನ್ನೇನು ಪಟೇಲರು ಧ್ವಜದ ಹಗ್ಗವನ್ನು ಕೈಯಲ್ಲಿ ಹಿಡಿದು ಅಲಗಾಡಿಸಿದರು. ಆದರೆ, ರಾಷ್ಟ್ರ ಧ್ವಜ ಮಾತ್ರ ಜಪ್ಪಯ್ಯ ಅಂದ್ರು ಹಾರಾಡಲಿಲ್ಲ. ಇದಕ್ಕೆಲ್ಲಾ ಕಗ್ಗಂಟಾಗಿದ್ದ (ದಾರ) ಹಗ್ಗ ಕಾರಣವಾಗಿತ್ತು. ಆ ಪರಿಸ್ಥಿತಿಯಲ್ಲಿ ಏನು ಮಾಡುವಂತಿಲ್ಲ. ನೀತಿ ನಿಯಮಾವಳಿಗಳು ಶಿಷ್ಟಾಚಾರ ಕೂಡಾ ಬೇರೆ. ರಾಷ್ಟ್ರ ಧ್ವಜ ಕೆಳಗಿಳಿಸುವಂತಿಲ್ಲ. ಈ ಸಂದರ್ಭದಲ್ಲಿ ಹಾಜರಿದ್ದ ರಾಜ್ಯಮಟ್ಟದ ಅಧಿಕಾರಿಗಳಿಂದ ಹಿಡಿದು, ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ನಡಕು ಹುಟ್ಟಲಾರಂಭಿಸಿತ್ತು. ಅಲ್ಲದೆ, ನೆರೆದಿದ್ದಲ್ಲೆವರು ಮೌನಕ್ಕೆ ಶರಣು… ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ತಳಕಲ್ ಗ್ರಾಮದ ಯುವಕ ನಿಂಗನಗೌಡ ಎಸ್ ಬೇಟಿಗೇರಿ  ಕಂಬ ಏರಿ, ಕಗ್ಗಂಟು ಬಿದ್ದಿದ್ದ ದಾರವನ್ನು ಸಡಿಲುಗೊಳಿಸುವ ಮೂಲಕ ರಾಷ್ಟ್ರ ಪ್ರೇಮ ಮೆರೆದಿದ್ದು ಜಿಲ್ಲೆಯ ಇತಿಹಾಸ ಪುಟಗಳಲ್ಲಿ ದಾಖಲಾಗಿದ್ದು ವಿಶೇಷ ಅಲ್ಲವೇ..!?

ಯುವಕನಿಗೆ ಪಟೇಲರು ನೌಕರಿ ಕೊಡಿಸಿದ್ದರು :  ರಾಷ್ಟ್ರ ಧ್ವಜಕ್ಕೆ ಬಿದ್ದಿದ್ದ ಕಗ್ಗಂಟನ್ನು ಕಂಬ ಹತ್ತಿ ಬಿಡಿಸಿ, ಸಾಹಸ ಮೆರೆದಿದ್ದ ತಳಕಲ್ ಗ್ರಾಮದ ನಿಂಗನಗೌಡ ಎಸ್ ಬೇಟಿಗೇರಿ ಎಂಬಾತನಿಗೆ ಆಗಿನ ಮುಖ್ಯಮಂತ್ರಿ ದಿವಂಗತ ಜೆ.ಹೆಚ್ ಪಟೇಲರು ಸಿಎಂ ಫಂಡ್ ಮುಖಾಂತರ 10 ಸಾವಿರ ರೂಪಾಯಿಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದರು. ಜೊತೆಗೆ ಅರಣ್ಯ ಇಲಾಖೆಯಲ್ಲಿ ಗುತ್ತಿಗೆ ನೌಕರಿ ಕೂಡಾ ಕೊಡಿಸಿದ್ದರು ಎಂಬುದಾಗಿ ಹೆಮ್ಮೆಯಿಂದ ಹೇಳುತ್ತಾರೆ ನಿಂಗನಗೌಡ ಅವರ ಮಗ ಸುನೀಲ್ ಬೇಟಿಗೇರಿ. ನಮ್ಮ ಕುಟುಂಬ ಎಂದಿಗೂ ಪಟೇಲರನ್ನು ಮರೆಯುವುದಿಲ್ಲ ಅವರ ಸಹಕಾರ ಅವಿಸ್ಮರಣೀಯವಾದದ್ದು ಎಂದು ನೆನೆಯುತ್ತಾರೆ. ಜೆ.ಹೆಚ್ ಪಟೇಲರು ಸೇರಿದಂತೆ ಹೆಮ್ಮೆಯ ಜಿಲ್ಲೆಯ ಯುವಕ ಈ ಸಧ್ಯ ನಮ್ಮೊಂದಿಗೆ ಇಲ್ಲ. ಆದ್ರೆ, ಇಬ್ಬರ ಹೆಸರು ಮಾತ್ರ ಜಿಲ್ಲೆಯ ಇತಿಹಾಸ ಪುಟದಲ್ಲಿ ಚಿರಸ್ಮರಣೀಯವಂತು ಸತ್ಯ..!!