ಸರಕಾರಿ ಶಾಲೆ ವಿದ್ಯಾರ್ಥಿ ‘ಕಾರ್ತಿಕ’ ಕೊಪ್ಪಳ ಜಿಲ್ಲೆಗೆ ಪ್ರಥಮ..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಯಲಬುರ್ಗಾ ತಾಲೂಕಿನ ಬಳೂಟಗಿ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕಾರ್ತಿಕ ಬಿ.ಎನ್, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 623 ಅಂಕಗಳನ್ನು ಪಡೆದು (ಶೇ. 99.68) ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ..!

ಒಂದನೇ ತರಗತಿಯಿಂದ 10 ನೇ ತರಗತಿವರೆಗೂ ಸರಕಾರಿ ಶಾಲೆಯಲ್ಲಿಯೇ ಅಭ್ಯಾಸ ಮಾಡಿರುವುದು ವಿದ್ಯಾರ್ಥಿ ಸಾಧನೆಯ ವಿಶೇಷ. ಕಾರ್ತಿಕ ಅವರ ತಂದೆ ದೊಡ್ಡಬಸಪ್ಪ ಅವರು ಅದೇ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಹಾಗೂ ತಾಯಿ ನಿರ್ಮಲಾ ಮಗನ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮಗನಿಗೆ ವಿದ್ಯೆ ನೀಡಿದ ವಿಶೇಷವಾಗಿ ಸರಕಾರಿ ಶಾಲೆ ಶಿಕ್ಷಕರು ಎಂಬುದನ್ನು ಬಹಳಷ್ಟು ಮೆಚ್ಚಿಕೊಂಡಿದ್ದಾರೆ. ಸರಕಾರಿ ಶಾಲೆ ಮತ್ತು ಸರಕಾರಿ ಶಾಲೆಯ ಶಿಕ್ಷಕರು ಎಂದರೇ.. ಮೂಗು ಮುರಿಯುವ ಇಂದಿನ ದಿನಮಾನಗಳಲ್ಲಿ ಇವರ ಅಭಿಪ್ರಾಯ ಸಮಾಜಕ್ಕೆ ಮಾದರಿಯಾಗಿದೆ. ನಿತ್ಯ 8 ಗಂಟೆಗಳ ಕಾಲ ಅಭ್ಯಾಸ ಮಾಡಿದ ಫಲವಾಗಿ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಅಲ್ಲಿನ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಪರಮೇಶ ಚಿಂತಾಮಣಿ ಅಭಿಮಾನ ವ್ಯಕ್ತಪಡಿಸಿದ್ದಾರೆ. ಅಂದಿನ ಅಭ್ಯಾಸವನ್ನು ಆ ದಿನವೇ ಪೂರ್ಣಗೊಳಿಸಿ, ಸದಾ ಕ್ರಿಯಾಶೀಲತೆಯಿಂದ ಅಭ್ಯಾಸದಲ್ಲಿ ತೊಡಗಿಕೊಂಡಿದ್ದು, ಈ ವಿಶಿಷ್ಟ ಸಾಧನೆಗೆ ಪ್ರಮುಖ ಕಾರಣವಾಗಿದೆ ಎಂದು ಶಾಲೆಯ ಗಣಿತ ಶಿಕ್ಷಕರು ಹಾಗೂ ಮುಖ್ಯಗುರು ಎಂ.ಡಿ.ಯೂಸುಫ್ ತಮ್ಮ ಶಾಲೆಯ ವಿದ್ಯಾರ್ಥಿ ಬಗ್ಗೆ ವಿಶ್ವಾಸವ್ಯಕ್ತಪಡಿಸಿದ್ದಾರೆ. ಅಲ್ಲದೆ, ಶಾಲೆಯ ಇಂಗ್ಲಿಷ್ ಶಿಕ್ಷಕ ಜಿ.ಡಿ.ದ್ಯಾಮನಗೌಡ್ರು, ವಿಜ್ಞಾನ ಶಿಕ್ಷಕಿ ಜಯಶ್ರೀ ಹಿರೇಮಠ, ಕನ್ನಡ ಶಿಕ್ಷಕಿ ಶೋಭಾ ನಾಲವಾಡ, ಹಿಂದಿ ಶಿಕ್ಷಕಿ ಅಂಜಿರುಕಿಯಾ, ಸಮಾಜಶಾಸ್ತ್ರದ ಅತಿಥಿ ಶಿಕ್ಷಕಿ ಮಹಾದೇವಿ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಶೈಲೇಂದ್ರ ಬಾಚಲಾಪುರ ಇವರುಗಳ ಶ್ರಮ ವಿದ್ಯಾರ್ಥಿ ಸಾಧನೆಗೆ ಪ್ರಮುಖ ಕಾರಣವೆಂದರು. ಈ ವಿಶಿಷ್ಟ ಸಾಧನೆಯ ವಿದ್ಯಾರ್ಥಿ ಕುಟುಂಬವು ಮೂಲತಃ ಬಳ್ಳಾರಿ ಜಿಲ್ಲೆಯ ಕುರುಗೊಡು ಪಟ್ಟಣದ ನಿವಾಸಿ. ಇಂತಹ ವಿಶಿಷ್ಟ ಸಾಧನೆಗೈದ ವಿದ್ಯಾರ್ಥಿಗೆ ‘ಕೃಷಿ ಪ್ರಿಯ’ ಪತ್ರಿಕೆ ಸಲಾಂ ಹೇಳಲುತ್ತದೆ..!!


ಶಾಲೆ ಫಲಿತಾಂಶ : ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಕಾರ್ತಿಕನ ಶಾಲೆ ಫಲಿತಾಂಶ ಶೇ.95 ರಷ್ಟು ಪಡೆದುಕೊಂಡಿದೆ. ಶಾಲೆಯ ವಿದ್ಯಾರ್ಥಿನಿ ಪವಿತ್ರಾ ಶರಣಪ್ಪ ಉಳ್ಳಾಗಡ್ಡಿ ಅವರು 625 ಅಂಕಗಳಿಗೆ 603 ಗಳನ್ನು ಪಡೆದುಕೊಂಡಿರುವುದು ಕೂಡಾ ವಿಶೇಷ. ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಸಾಧನೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮುತ್ತುರೆಡ್ಡಿ ರಡ್ಡೇರ, ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರು ಸೇರಿದಂತೆ ಸರ್ವ ಸದಸ್ಯರು, ಗ್ರಾಮಸ್ಥರು ಅಭಿನಂದಿಸಿದ್ದಾರೆ..!