77ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ : ಹನುಮನಾಳ ಗ್ರಾ.ಪಂ.ಯಲ್ಲಿ ಯೋಧರಿಗೆ ಸನ್ಮಾನ

ಮಹಾಂತೇಶ ಚಕ್ರಸಾಲಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : “ನನ್ನ ಮಣ್ಣು ನನ್ನ ದೇಶ” (ಮೇರಿ ಮಾಟಿ ಮೇರಾ ದೇಶ) ಅಭಿಯಾನದಡಿ ಆಜಾದಿ ಕಾ ಅಮೃತ ಮಹೋತ್ಸವದ ಸಮಾರೋಪ ಸಮಾರಂಭದ ಅಂಗವಾಗಿ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮ ಪಂಚಾಯಿತಿಯಲ್ಲಿ 77ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಂದು ನಿವೃತ್ತ ಯೋಧರನ್ನು ಸನ್ಮಾನಿಸುವ ಮೂಲಕ ವಿಭಿನ್ನವಾಗಿ ಆಚರಿಸಲಾಗಿತು.!

ದಿನಾಂಕ 15-08-2023 ಮಂಗಳವಾರ ಬೆಳಿಗ್ಗೆ 7.30 ಕ್ಕೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಗ್ರಾಮ ಪಂಚಾಯಿತಿ ಸರ್ವ ಸದಸ್ಯರ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಶಾಂತ ಹಿರೇಮಠ ಅವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ಪಂಚಾಯಿತಿ ಆವರಣದಲ್ಲಿ ಮಾತೃ ಭೂಮಿಯ ಘನತೆ ಹಾಗೂ ಸ್ವಾತಂತ್ರ್ಯ ಕಾಪಾಡಲು ತಮ್ಮ ಪ್ರಾಣ ತ್ಯಾಗ ಮಾಡಿದ ವೀರರ ಶಿಲಾ ಫಲಕ ಅನಾವರಣಗೊಳಿಸಲಾಗಿತು.

ನಂತರ ಪಿಡಿಓ ಪ್ರಶಾಂತ್ ಹಿರೇಮಠ ಅವರು ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಭಾಗವಹಿಸಿದ್ದ ಸರ್ವರ ಕೈಯಲ್ಲಿ ಮಣ್ಣು ಇರಿಸಿ “ನನ್ನ ಮಣ್ಣು ನನ್ನ ದೇಶ” (ಮೇರಿ ಮಾಟಿ ಮೇರಾ ದೇಶ) ಎಂಬ ಘೇಯವಾಖ್ಯದೊಂದಿಗೆ ಪ್ರಮಾಣ ವಚನ ಬೋಧಿಸಿದರು‌ ಭಾರತೀಯ ಸೇನೆಗೆ ಸೇರಿ ದೇಶ ಸೇವೆ ಸಲ್ಲಿಸುತ್ತಿರುವ ವೀರ ಯೋಧರು ಹಾಗೂ ನಿವೃತ್ತ ಯೋಧರನ್ನು ಗ್ರಾಮ ಪಂಚಾಯಿತಿ ವತಿಯಿಂದ ಶಾಲು ಹೊದಿಸಿ ಫಲ ಪುಷ್ಪ ನೀಡಿ ಗೌರವಿಸಿದ್ದು ವಿಶೇಷವಾಗಿತ್ತು.

ಇದೇವೇಳೆ ಹನುಮನಾಳ ಗ್ರಾಮದ ಅಮರೇಶ ತುಮರಿ ಎಂಬ ಯೋಧ ಭಾರತೀಯ ಸೇನೆಯಲ್ಲಿ ಕರ್ತವ್ಯನಿರತ ಸಂದರ್ಭದಲ್ಲಿ ನಿಧನರಾಗಿದ್ದರ ಹಿನ್ನೆಲೆ ಮೃತ ಯೋಧನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಗಿತು. ಮುಂದಿನ ಜನೇವರಿ 26 ಗಣರಾಜ್ಯೋತ್ಸವ ದಿನಾಚರಣೆಯೊಳಗೆ ಮೃತ ಯೋಧನ ಸ್ಮಾರಕ ನಿರ್ಮಾಣಕ್ಕೆ ಪಂಚಾಯಿತಿಯಿಂದ ಭೂಮಿ ನೀಡುವುದಾಗಿ ಕುಟುಂಬಸ್ಥರಿಗೆ ಪಂಚಾಯಿತಿ ಅಧಿಕಾರಿಗಳು ಭರವಸೆ ನೀಡಿದರು.

ಈ ವೊಂದು ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಗ್ರಾಮದ ಯೋಧರು, ಮಾಜಿ ಯೋಧರು, ಗ್ರಾಮ ಪಂಚಾಯಿತಿ ಸರ್ವ ಸದಸ್ಯರು, ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.