ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಗ್ರಾಮೀಣ ಪ್ರದೇಶಗಳಲ್ಲಿ ಅಪಘಾತ ಸೇರಿದಂತೆ ಆರೋಗ್ಯ ಸಮಸ್ಯೆಯಿಂದ ಬಳಲುವ ಬಡ ರೋಗಿಗಳ ತುರ್ತು ಕರೆಗೆ 108 ಆಂಬುಲೆನ್ಸ್ ಸೇವೆ ಸಿಗದೇ ಪರದಾಡುವಂತಾಗಿದೆ.!
ಜಿಲ್ಲೆಯ ತಾವರಗೇರಾದ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಕುಷ್ಟಗಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಲಭ್ಯವಿರುವ 108 ಆಂಬುಲೆನ್ಸ್’ಗಳು ಕಳೆದ ಕೆಲ ದಿನಗಳಿಂದ ದುರಸ್ತಿಗೆ ಒಳಪಟ್ಟು, ಮೂಲೆ ಸೇರಿವೆ. ಗ್ರಾಮೀಣ ಪ್ರದೇಶಗಳ ರೋಗಿಗಳು ಹಾಗೂ ಅಪಘಾತಕ್ಕೊಳಗಾದವರಿಗೆ ಆಂಬುಲೆನ್ಸ್ ಸೇವೆಯಿಲ್ಲದೆ, ತಾಲೂಕಾಸ್ಪತ್ರೆ ಇಲ್ಲವೋ ಜಿಲ್ಲಾಸ್ಪತ್ರೆಗೆ ತೆರಳಬೇಕಾದರೆ ಖಾಸಗಿ ವಾಹನಗಳ ಮೊರೆ ಹೋಗುವಂತಹ ಪರಿಸ್ಥಿತಿ ಎದುರಾಗಿದೆ. ಬಡ ರೋಗಿಗಳಿಗೆ ಖಾಸಗಿ ವಾಹನಗಳಿಗೆ ಬಾಡಿಗೆ ಭರಿಸಲು ಆಗದೇ ತೊಂದರೆ ಪಡುವಂತಾಗಿದೆ.
ಈ ಕುರಿತು ತಾಲೂಕು ಆರೋಗ್ಯಾಧಿಕಾರಿ ಡಾ.ಆನಂದ ಗೋಟೂರು ಅವರನ್ನು ಸಂಪರ್ಕಿಸಿದಾಗ, ಕುಷ್ಟಗಿ ತಾಲೂಕಿನ ಹನುಮಸಾಗರ, ಹನುಮನಾಳ, ಕುಷ್ಟಗಿ, ತಾವರಗೇರಾ ನಾಲ್ಕು ಹೋಬಳಿಗೆ ಒಂದರಂತೆ ನಾಲ್ಕು 108 ಆಂಬುಲೆನ್ಸ್ ವಾಹನಗಳಿವೆ. ತಾವರಗೇರಾ ಆಸ್ಪತ್ರೆಯ ಆಂಬುಲೆನ್ಸ್ ಕಳೆದೊಂದು ವಾರದಿಂದ ದುರಸ್ತಿಗೆ ಒಳಪಟ್ಟು ಸೇವೆ ಸ್ಥಗಿತವಾಗಿದೆ. ಕುಷ್ಟಗಿ ಆಸ್ಪತ್ರೆಯ ಆಂಬುಲೆನ್ಸ್ ಟಯರ್ ಸವಕಳಿಯಿಂದ ಆಸ್ಪತ್ರೆಯಲ್ಲಿ ನಿಂತಿದೆ. ಕೂಡಲೇ ದುರಸ್ತಿಗೊಳಿಸಲು ಸಂಬಂಧಿಸಿದ ಏಜೆನ್ಸಿಯವರಿಗೆ ತಿಳಿಸಿದ್ದೇನೆ. ಇನ್ನೊಂದು ವಾರದೊಳಗೆ ಕುಷ್ಟಗಿ ಆಂಬುಲೆನ್ಸ್ ಜನರ ಸೇವೆಗೆ ಲಭ್ಯವಾಗಲಿದೆ. ತಾವರಗೇರಾ ಆಸ್ಪತ್ರೆಯ ಆಂಬುಲೆನ್ಸ್ ದುರಸ್ಥಿ ಸರಿಪಡಿಸಿ ನಾಳೆ ಶುಕ್ರವಾರ ಸೇವೆಗೆ ಅಣಿಗೊಳಿಸಲಾಗುವುದು ಎಂದು ಏಜೆನ್ಸಿ ವ್ಯವಸ್ಥಾಪಕರು ಹೇಳಿರುವುದಾಗಿ ತಿಳಿಸಿದ್ದಾರೆ.
ಅಪಘಾತ ಸೇರಿದಂತೆ ಆರೋಗ್ಯ ಸಮಸ್ಯೆಯಿಂದ ಬಳಲುವ ರೋಗಿಗಳಿಗೆ ತುರ್ತು ಕರೆಗೆ ಸಕಾಲಕ್ಕೆ 108 ಆಂಬುಲೆನ್ಸ್ ಸೇವೆ ಲಭ್ಯವಾಗುವುದೋ ಇಲ್ಲವೋ ಕಾದುನೋಡಬೇಕಿದೆ.!!