ಬೈಕ್ ಲಾರಿ ನಡುವೆ ರಸ್ತೆ ಅಪಘಾತ: ಬೈಕ್ ಸವಾರನ ಕಾಲು ನುಜ್ಜುಗುಜ್ಜು

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ನವಲಹಳ್ಳಿ ಗ್ರಾಮದ ರಾಜ್ಯ ಹೆದ್ದಾರಿ ಬಳಿ ಬೈಕ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರನ ಕಾಲು ನುಜ್ಜುಗುಜ್ಜಾದ ಘಟನೆ ಶುಕ್ರವಾರ ನಡೆದಿದೆ.

ತಾವರಗೇರಾ ಪಟ್ಟಣದ ನಿವಾಸಿ ನಾಮದೇವ ತಂದೆ ನಾರಾಯಣಪ್ಪ ಕಂಚಗಾರ ಎಂಬುವ ಬೈಕ್ ಸವಾರನ ಕಾಲಿನ ಇಡೀ ಪಾದ ನುಜ್ಜುಗುಜ್ಜಾಗಿದೆ. ಸಿಂಧನೂರು-ಹುಬ್ಬಳ್ಳಿ ರಾಜ್ಯ ಹೆದ್ದಾರಿಯಲ್ಲಿ ತಾವರಗೇರಾ ಕಡೆಯಿಂದ ಕುಷ್ಟಗಿ ಪಟ್ಟಣದ ಕಡೆಗೆ ಬರುತಿದ್ದ ಬೈಕ್ ಹಾಗೂ ಕುಷ್ಟಗಿ ಪಟ್ಟಣದಿಂದ ಎದುರುಗೊಂಡು ಬರುತಿದ್ದ ವಿಂಡ್ ಪವರ್ ಕಂಪನಿಗೆ ಸೇರಿದ ಲಾರಿ ನಡುವೆ ಈ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಬೈಕಲ್ಲಿ ಬರುತಿದ್ದ ಒಂದು ಮಗು ಹಾಗೂ ಒರ್ವ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿವೆ.

ಕರ್ತವ್ಯ ಮುಗಿಸಿಕೊಂಡು ತಾವರಗೇರಾ ಪಟ್ಟಣಕ್ಕೆ ತೆರಳುತಿದ್ದ ಪೊಲೀಸ್ ಸಿಬ್ಬಂದಿ ಮಹಾಂತೇಶ ಚಿಟ್ಟಿ ಎಂಬುವರು ತಾವರಗೇರಾ ಪೊಲೀಸ್ ಠಾಣಾಧಿಕಾರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿನೀಡಿದ ಪೊಲೀಸರು ಬೈಕ್ ಸವಾರನನ್ನು ಕೊಪ್ಪಳ ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಲಾರಿ ಮತ್ತು ಜಕಂಗೊಂಡ ಬೈಕ್ ಅನ್ನು ವಶಕ್ಕೆ ಪಡೆದ ತಾವರಗೇರಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.