ಸಿರಿಧಾನ್ಯಗಳಿಂದ ರೋಗಮುಕ್ತ ಜೀವನ: ಶಾಸಕ ಡಿ.ಎಚ್. ಪಾಟೀಲ್

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ಬದಲಾದ ಜೀವನ ಕ್ರಮದಲ್ಲಿ ಸಿರಿಧಾನ್ಯ ಆಹಾರ ಬಳಸಿ ರೋಗಗಳಿಂದ ಮುಕ್ತರಾಗಬೇಕಿದೆ ಎಂದು ಶಾಸಕ ದೊಡ್ಡನಗೌಡ ಎಚ್. ಪಾಟೀಲ್ ಅವರು ಹೇಳಿದರು.

ಅವರು ಜಿಲ್ಲೆಯ ಕುಷ್ಟಗಿ ಪಟ್ಟಣದ ಸರ್ಕಾರಿ ಪ್ರದಮ ದರ್ಜೆ ಕಾಲೇಜು ಸಭಾ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆಯಿಂದ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಿರಿಧಾನ್ಯ, ಸಾವಯವ ಮೇಳ ಮತ್ತು ರೈತರ ದಿನಾಚರಣೆ ಹಾಗೂ 2023ರ ಸಿರಿಧಾನ್ಯ ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಈ ಹಿಂದೆ, ಹಿರಿಯರು ಸೇವಿಸುತಿದ್ದ ಆಹಾರ ಪದ್ಧತಿಯ ಜೀವನ ಶೈಲಿಯನ್ನು ಮರೆತು ಇಂದಿನ ಆಧುನಿಕ ಪದ್ಧತಿಗೆ ಮಾರು ಹೋಗಿರುವ ಜನ ಅಕ್ಕಿ ಬಳಕೆಗೆ ಹಾಗೂ ಪಾಸ್ಟ್ ಫುಡ್ ನಂತಹ ಸುಲಭ ಆಹಾರ ಮೊರೆ ಹೋದ ಪರಿಣಾಮ ಬಿಪಿ, ಶುಗರ್, ಕ್ಯಾನ್ಸರ್ ನಂತಹ ಕಾಯಿಲೆಗಳಿಗೆ ಪರದಾಡುವಂತಾಗಿದೆ. ಸಿರಿಧಾನ್ಯಗಳು ಆರೋಗ್ಯವಂತರಾಗಿರಲು ಸಹಾಯಕವಾಗಿವೆ. ಮುಂದಿನ ಪೀಳಿಗೆಯ ಉತ್ತಮ ಆರೋಗ್ಯಪೂರ್ಣ ಬದುಕಿಗೆ ಸದೃಢ ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಸಿರಿಧಾನ್ಯಗಳನ್ನು ಅಧಿಕವಾಗಿ ಬೆಳೆಸಿ ಬಳಸುವ ನಿಟ್ಟಿನಲ್ಲಿ ಪ್ರೇರೇಪಿಸಬೇಕಾಗಿದೆ. ಸಿರಿಧಾನ್ಯಗಳು ಎಲ್ಲ ವಾತಾವರಣದಲ್ಲಿ ಬೆಳೆಯಬಹುದಾಗಿದೆ. ಜಿಲ್ಲೆಯಲ್ಲಿ ನವಣೆ, ಊದಲು, ಸಾಮೆ, ರಾಗಿ, ಸಜ್ಜೆ ಮುಂತಾದವುಗಳನ್ನು ಬೆಳೆಸಲು ಕೃಷಿ ವಿಜ್ಞಾನಿಗಳು ರೈತರಿಗೆ ಪ್ರೋತ್ಸಾಹಿಸಬೇಕು. ಇನ್ನಷ್ಟು ಪ್ರಚಾರ ಅಗತ್ಯವಿದೆ ಎಂದರು.

ತೋಟಗಾರಿಕೆ ಬೆಳೆಗಾರರ ಸಂಘದ ಸದಸ್ಯ ಶ್ಯಾಮರಾವ್ ಕುಲಕರ್ಣಿ ಮಾತನಾಡಿ, ಇಂದಿನ ರೈತಾಪಿ ವರ್ಗಕ್ಕೆ ಕೃಷಿ ವಿಜ್ಞಾನಿಗಳು ಸಿರಿಧಾನ್ಯ ಬೆಳೆಯ ಪ್ರಮಾಣ ಮತ್ತು ಗುಣಮಟ್ಟತೆ ಕುರಿತು ಪರಿಚಯಿಸಬೇಕು. ಈ ಹಿಂದೆ 1964 ರಲ್ಲಿ ದೇಶದಲ್ಲಿ ಆಹಾರದ ಕೊರತೆ ಉಂಟಾದಾಗ ಆಗ ಕೃಷಿ ವಿಜ್ಞಾನಿಗಳು ಹೈಬ್ರಿಡ್ ತಳಿ ಪರಿಚಯಿಸಿದ್ದರಿಂದ ಇಂದು ಈ ಸ್ಥಿತಿಯಲ್ಲಿದ್ದೇವೆ. ಹಾಗಾಗಿ ಸಾವಯವ ಸಿರಿಧಾನ್ಯಗಳ ಕ್ವಾಂಟಿಟಿ ಮತ್ತು ಕ್ವಾಲಿಟಿ ಬಗ್ಗೆ ಪರಿಚಯಿಸಬೇಕು ಎಂದರು.

ಕೃಷಿ ವಿಜ್ಞಾನಿ ಡಾ.ಕವಿತಾ ಉಳ್ಳಿಕಾಶಿ, ಅವರು ಸಾವಯವ ಸಿರಿಧಾನ್ಯ ಬೆಳೆಗಳ ಮಹತ್ವದ ಕುರಿತು ಮಾಹಿತಿ ನೀಡಿದರು. ಕೃಷಿ ತಂತ್ರಜ್ಞ ಸಂಸ್ಥೆ ಕಾರ್ಯದರ್ಶಿ ವೀರಣ್ಣ ಕಮತರ ಮಾತನಾಡಿ, ಕುಷ್ಟಗಿ ತಾಲೂಕು ದಾಳಿಂಬೆ ಹಾಗೂ ದ್ರಾಕ್ಷಿ ಬೆಳೆದು ಈ ಎರಡು ಹಣ್ಣುಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ರಪ್ತು ಮಾಡಿ ಹೆಸರಾಗಿದೆ. ಅದೇರೀತಿ ಸಿರಿಧಾನ್ಯ ಅಂತರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆಯಿದ್ದು, ರೈತರು ಸಿರಿಧಾನ್ಯ ಬೆಳೆಗೆ ಹೆಚ್ಚು ಒತ್ತು ನೀಡಿ. ಸಿರಿಧಾನ್ಯ ಬೆಳೆಗೆ ಈ ಭೂಮಿ ಪೂರಕವಿದೆ. ಕೃಷಿ ಹೊಂಡಗಳ ಮುಖಾಂತರ ಬೆಳೆ ವೃದ್ದಿಸಿಕೊಳ್ಳಬಹುದಾಗಿದೆ. ಜೊತೆಗೆ ಮುಂದಿನ ಸಂತತಿಯ ಆರೋಗ್ಯಕ್ಕೆ ಕೊಡುಗೆ ಕೊಡಲು ಹಾಗೂ ಮಣ್ಣಿನ ಫಲವತ್ತತೆ ಉಳಿಸಲು ಸಿರಿಧಾನ್ಯ ಬೆಳೆಯಿರಿ ಎಂದು ಕರೆ ನೀಡಿದರು.

ಇದೇವೇಳೆ ಜಿಲ್ಲೆಯ ನಾಲ್ವರು ರೈತರಿಗೆ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮೊದಲಿಗೆ ಚರಣಸಿಂಗ್ ಅವರ ಭಾವಾಚಿತ್ರಕ್ಕೆ ಪುಷ್ಪಾರ್ಫಣೆ ಮಾಡಿ ಗೌರವಿಸಲಾಯಿತು‌.

ಈ ವೇಳೆ ರಾಜ್ಯ ಕೃಷಿಕ ಸಮಾಜ ಪ್ರತಿನಿಧಿ ಶಂಕ್ರಪ್ಪ ಚವಡಿ, ಜಿಲ್ಲಾ ಉಪಾಧ್ಯಕ್ಷ ಚಂದಪ್ಪ ತಳವಾರ, ತಾಲೂಕಾಧ್ಯಕ್ಷ ಎಚ್.ವಿ.ವಿರೂಪಾಕ್ಷಪ್ಪ, ಜಂಟಿ ಕೃಷಿ ನಿರ್ದೇಶಕ ರುದ್ರೇಶ ಟಿ.ಎಸ್., ಉಪ ಕೃಷಿ ನಿರ್ದೇಶಕ ಸಹದೇವ ಯರಗೊಪ್ಪ, ಸರ್ಕಾರಿ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಎಸ್.ವಿ.ಡಾಣಿ, ಕೃಷಿ ವಿಜ್ಞಾನಿ ಡಾ.ಎಂ.ವಿ. ರವಿ, ಸಹಾಯಕ ಕೃಷಿ ನಿರ್ದೇಶಕ ಅಜ್ಮೀರ ಅಲಿ ಸೇರಿದಂತೆ ರೈತ ಸಂಘಟನೆ ಮುಖಂಡರು ಉಪಸ್ಥಿತರಿದ್ದರು. ಜಿಲ್ಲೆಯಿಂದ ಆಗಮಿಸಿದ್ದ ಅನೇಕ ಸಂಖ್ಯೆಯ ರೈತರು ಹಾಗೂ ರೈತ ಮಹಿಳೆಯರು ಪಾಲ್ಗೊಂಡು ಸಿರಿಧಾನ್ಯ ಹಬ್ಬದ ಸಂಭ್ರಮದ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಗಮನ ಸೆಳೆದ ಕೃಷಿ ಉಪಕರಣ, ಯಂತ್ರಗಳ ಮಾರಾಟ ಮಳಿಗೆಗಳು :
ಕಾಲೇಜು ಆವರಣದಲ್ಲಿ ತೆರೆಯಲಾಗಿದ್ದ ನಂದಿನಿ ಮಿಲ್ಕ್ ಪಾರ್ಲರ್, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ, ಇಂಡಿಯನ್ ಫಾರ್ಮರ್ ಫರ್ಟಿಲೈಝರ್ಸ್, ತೋಟಗಾರಿಕೆ ಪ್ರದರ್ಶನ ಮತ್ತು ಮಾಹಿತಿ ಕೇಂದ್ರ, ಪಶು ವೈದ್ಯಕೀಯ ಸೇವಾ ಮಳಿಗೆ, ಮೀನುಗಾರಿಕೆ ಇಲಾಖೆ ಮಾಹಿತಿ ಮಳಿಗೆ, ಸಿರಿಧಾನ್ಯಗಳ ಖರೀದಿ ಮಳಿಗೆ, ಸಿರಿಧಾನ್ಯಗಳಿಂದ ತಯಾರಿಸಲಾದ ಪೌಷ್ಟಿಕ ಪೌಡರಗಳ ಹಾಗೂ ಸಿಹಿ ಖಾದ್ಯಗಳ ಮತ್ತು ವಿವಿಧ ಕಾಳುಗಳ ಶುದ್ಧ ಅಡುಗೆ ಎಣ್ಣೆ ಮಾರಾಟ ಮಳಿಗೆ, ತೋಟಗಾರಿಕೆ ಬೆಳೆ ಪರಿಚಯಿಸುವ ಮಳಿಗೆ,

ನೂತನವಾಗಿ ಮಾರುಕಟ್ಟೆಗೆ ಬಂದ ವಿವಿಧ ಬಗೆಯ ಕೃಷಿ ಯಂತ್ರೋಪಕರಣಗಳ ಮಾರಾಟ ಮಳಿಗೆ, ಮನೆಯಲ್ಲಿಯೇ ಸಿದ್ಧಪಡಿಸಿಕೊಳ್ಳಬಹುದಾದ ಕಿರು ಹಿಟ್ಟಿನ ಯಂತ್ರ, ರೊಟ್ಟಿ ಚಪಾತಿ ಯಂತ್ರ, ಅಡುಗೆ ಎಣ್ಣೆ ತಯಾರಿಸಿಕೊಳ್ಳಬಹುದಾದ ಯಂತ್ರಗಳು, ಖಾರ ಕುಟ್ಟುವ ಯಂತ್ರ,

ಮೇವು ಕಟಾವು ಯಂತ್ರ, ಹನಿ ನೀರಾವರಿಗೆ ಬೇಕಾಗುವ ಪೈಪುಗಳ ವಿಶಾಲ ಪ್ರದರ್ಶನ. ಜೊತೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಆರೋಗ್ಯ ಸೇವೆ ನೀಡಲು ಹಾಗೂ ಅಂಗನವಾಡಿ ಕಾರ್ಯಕರ್ತರು ಪೌಷ್ಟಿಕಾಂಶ ಯುಕ್ತ ಪದಾರ್ಥಗಳು ಮತ್ತು ತರಕಾರಿಗಳನ್ನು ಕಾಳುಗಳ ಪ್ರದರ್ಶನ ಸೇರಿದಂತೆ ಇತರೆ ಸಾಮಗ್ರಿಗಳ ಮಾರಾಟ ಮಳಿಗೆಗಳು ಗಮನ ಸೆಳೆದವು. ಪೊಲೀಸ್ ಇಲಾಖೆ ಭದ್ರತೆ ಒದಗಿಸಿತ್ತು.

ಒಟ್ಟಾರೆ ಇಂದು ರೈತರ ದಿನಾಚರಣೆ ಪ್ರಯುಕ್ತ ಕಾಲೇಜು ಆವರಣದಲ್ಲಿ ನಡೆದ ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಸಾವಯವ ಮೇಳ, 2023ರ ಸಿರಿಧಾನ್ಯ ಹಬ್ಬ ಅನ್ನದಾತರ ಜಾತ್ರೆಯಾಗಿತ್ತು.