ಮಹಾಂತೇಶ ಚಕ್ರಸಾಲಿ
ಕೃಷಿಪ್ರಿಯ ನ್ಯೂಸ್ |
ಕುಷ್ಟಗಿ : ತಾಲೂಕಿನ ಹನುಮನಾಳ ಗ್ರಾಮದ ಶ್ರೀ ಮಾರುತೇಶ್ವರ ನೂತನ ರಥೋತ್ಸವ ಸುತ್ತಲಿನ ಗ್ರಾಮಗಳ ಸಾವಿರಾರು ಭಕ್ತರ ಮಧ್ಯೆ ಭಾನುವಾರ ಸಂಜೆ ಸಂಭ್ರಮದಿಂದ ಜರುಗಿತು.
ಕಾರ್ತಿಕ ಮಾಸದ ಹನುಮದ್ವರಿತದ ಮಹಾ ಪವಿತ್ರದಿನವಾದ ಇಂದು ಬೆಳಿಗ್ಗೆ ದೇವಸ್ಥಾನದಲ್ಲಿ ಶ್ರೀಮಾರುತೇಶ್ವರ ಮೂರ್ತಿಗೆ ಪಂಚಾಮೃತಾಭಿಷೇಕ, ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಗ್ರಾಮಸ್ಥರು ಮಡಿ-ಉಡಿಯಿಂದ ಭಕ್ತಿ ಸಮರ್ಪಿಸಿದರು.
ಈ ವರ್ಷ ಗ್ರಾಮದ ಶ್ರೀ ಮಾರುತೇಶ್ವರ ದೇವರ ಜಾತ್ರೆಗೆ ನೂತನ ರಥ ನಿರ್ಮಾಣಗೊಂಡಿದ್ದು, ಗ್ರಾಮದಲ್ಲೇ ಶಿಲ್ಪ ಕಲಾವಿದರು ನೂತನ ತೇರು ನಿರ್ಮಾಣ ಮಾಡಿರುವುದು ವಿಶೇಷ. ನೂತನ ರಥೋತ್ಸವ ಕಣ್ತುಂಬಿಕೊಳ್ಳಲು ಜನ ಹಾತೊರೆಯುತ್ತಿದ್ದರು. ಬೆಳಿಗ್ಗೆಯಿಂದಲೇ ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಮದ್ಯಾಹ್ನ ನಡೆದ ಲಘು ರಥೋತ್ಸವಕ್ಕೆ ಶಾಸಕ ದೊಡ್ಡನಗೌಡ ಎಚ್ ಪಾಟೀಲ್ ಅವರು ಚಾಲನೆ ನೀಡಿದರು.
ನಂತರ ಡೊಳ್ಳು ಕುಣಿತ, ನಾನಾ ಪೂಜಾ ಕಾರ್ಯಕ್ರಮ ನೂತನ ರಥೋತ್ಸವ ನಿಮಿತ್ತ ಜರುಗಿದವು. ಕೊಡತಗೇರಿ ಗ್ರಾಮದಿಂದ ದೈವದ ಕಳಸ ಹಾಗೂ ಬಸಾಪೂರ ಗ್ರಾಮದಿಂದ ನೂತನ ರಥದ ಹೊಸ ಹಗ್ಗವನ್ನು ಮೆರವಣಿಗೆ ಮೂಲಕ ತರಲಾಯಿತು. ಕಳಸ ಕನ್ನಡಿ ಹಿಡಿದ ನೂರಾರು ಮಹಿಳೆಯರು ಪಾಲ್ಗೊಂಡು ಮೆರವಣಿಗೆಗೆ ಮೆರಗು ತಂದರು. ಸಕಲ ವಾದ್ಯ ವಾದನ ಗಮನ ಸೆಳೆಯಿತು.
ಸಂಜೆ ಶ್ರೀಮಾರುತೇಶ್ವರ ಉತ್ಸವ ಮೂರ್ತಿ ಇರಿಸಿದ ಮಹಾ ರಥೋತ್ಸವಕ್ಕೆ ವಿವಿಧ ಮಠಾಧೀಶರು ಚಾಲನೆ ನೀಡಿದರು. ಈ ವೇಳೆ ಗ್ರಾಮದ ಗುರುಹಿರಿಯರು, ಮುಖಂಡರು, ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು. ಸಕಲ ವಾದ್ಯ ವಾದನದೊಂದಿಗೆ ರಥ ಬೀದಿಯಲ್ಲಿ ಸಾಗಿದ ಶ್ರೀ ಮಾರುತೇಶ್ವರನ ನೂತನ ರಥೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಸಂಖ್ಯೆಯ ಭಕ್ತರು, ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ ನವಜೋಡಿಗಳು ಹೂವು, ಹಣ್ಣು, ಕಾಯಿ, ಉತ್ತತ್ತಿ, ಲಿಂಬೆಹಣ್ಣು ಭಕ್ತಿಯಿಂದ ಸಮರ್ಪಿಸಿ ನೂತನ ರಥೋತ್ಸವ ಸಂಭ್ರಮಕ್ಕೆ ಸಾಕ್ಷಿಯಾದರು.