ಪಾರಂಪರಿಕ ಕಟ್ಟಡ ಪುನರುಜ್ಜೀವನಕ್ಕೆ ಒತ್ತಾಯಿಸಿ ತಹಸೀಲ್ದಾರ್’ಗೆ ಮನವಿ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ಹೈದರಾಬಾದ್ ನಿಜಾಮರ ಆಡಳಿತದಲ್ಲಿ ನಿರ್ಮಾಣಗೊಂಡ ಪಾರಂಪರಿಕ ಕಟ್ಟಡಗಳನ್ನು ಉಳಿಸಿ ಅವುಗಳನ್ನು ಪುನರುಜ್ಜೀವನಗೊಳಿಸಬೇಕು ಎಂದು ಜಿಲ್ಲೆಯ ಕುಷ್ಟಗಿ ಪಟ್ಟಣದ ನಾಗರಿಕರು ತಹಸೀಲ್ದಾರ್ ಅವರಿಗೆ ಒತ್ತಾಯಿಸಿದರು.

ಡಿ.27 ರಂದು ಬುಧವಾರ ಇಲ್ಲಿನ ತಹಸೀಲ್ದಾರ್ ಕೋರ್ಯಾಲಯದಲ್ಲಿ ಸಮಾವೇಶಗೊಂಡ ಪಟ್ಟಣದ ಸಂಘ ಸಂಸ್ಥೆಗಳ ಪ್ರಮುಖರು ಈ ಕುರಿತು ಬರೆದ ಮನವಿ ಪತ್ರವನ್ನು ಗ್ರೇಡ್-2 ತಹಸೀಲ್ದಾರ್ ಮುರಳೀಧರ ಮುಕ್ತೆದಾರ ಅವರಿಗೆ ಸಲ್ಲಿಸಿದರು. ಪಟ್ಟಣದಲ್ಲಿ ಹೈದ್ರಾಬಾದ್ ನಿಜಾಮರ ಆಡಳಿತದಲ್ಲಿ ನಿರ್ಮಾಣಗೊಂಡ ಪಾರಂಪರಿಕ ಕಟ್ಟಡದಲ್ಲಿದ್ದ ತಹಸೀಲ್ದಾರ್ ಕಾರ್ಯಾಲಯ ಹಲವು ವರ್ಷಗಳ ಹಿಂದೆ ಅಭಿವೃದ್ಧಿ ಹೆಸರಲ್ಲಿ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತು. ಆದರೆ, ಸುಸಜ್ಜಿತ ಪಾರಂಪರಿಕ ಕಟ್ಟಡ ನಿರ್ವಹಣೆಯಿಲ್ಲದೇ ಪಾಳುಬಿದ್ದು ನಶಿಸುವ ಹಂತ ತಲುಪುತ್ತಿದೆ. ಇದೇರೀತಿ ನಿಜಾಮರ ಆಡಳಿತದಲ್ಲಿ ನಿರ್ಮಾಣಗೊಂಡ ಕಲ್ಯಾಣ ಕರ್ನಾಟಕ ಭಾಗದ ಅನೇಕ ಪಾರಂಪರಿಕ ಕಟ್ಟಡಗಳು ಸರ್ಕಾರದ ಉದಾಸೀನಕ್ಕೊಳಪಟ್ಟು ಶಿಥಿಲಾವಸ್ಥೆಗೆ ತಲುಪುತ್ತಿವೆ. ಈಗಾಗಲೇ ಪಟ್ಟಣದ ಪೊಲೀಸ್ ಠಾಣೆ ಪಾರಂಪರಿಕ ಕಟ್ಟಡವನ್ನು ಕಳೆದುಕೊಂಡಾಗಿದೆ. ಸದ್ಯ ಗಟ್ಟಿಮುಟ್ಟಾದ ಹಳೇ ತಹಸೀಲ್ದಾರ್ ಕಟ್ಟಡ ನಿರ್ವಹಣೆಯಿಲ್ಲದೇ ಹಾನಿಗೊಳಗಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿರುವ ನೋಗರಿಕರು, ಕಟ್ಟಡ ಸಂರಕ್ಷಣೆಗೆ ಸರ್ಕಾರ ಮುಂದಾಗಬೇಕು. ಈ ಭಾಗದ ಪರಂಪರೆ, ಸಾಂಸ್ಕೃತಿಕ ತೋರಿಸಿಕೋಡುವ ಕಟ್ಟಡಗಳು ಮತ್ತು ಇದರಲ್ಲಿ ಬಳಸಿರುವ ತಾಂತ್ರಿಕತೆ ಮುಂದಿನ ಪೀಳಿಗೆಗೆ ದೊರಕಿಸಿಕೊಡಬೇಕಾದ್ದು ನಾಗರಿಕರ ಕರ್ತವ್ಯವಾಗಿದೆ. ಹಾಗಾಗಿ ಈ ವೊಂದು ಪಾರಂಪರಿಕ ಕಟ್ಟಡವನ್ನು ಸರಿಪಡಿಸಿ ಸಾರ್ವಜನಿಕರ ಬಳಕೆಗೆ ಅನುಕೂಲ ಮಾಡಿಕೊಡಬೇಕು. ಕುಷ್ಟಗಿ ತಾಲೂಕಿನಲ್ಲಿ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಸುಸಜ್ಜಿತ ಕಟ್ಟಡದ ಅವಶ್ಯಕತೆಯಿದೆ. ಈ ಕಟ್ಟಡವನ್ನು ನವೀಕರಣಗೊಳಿಸಿ ಒದಗಿಸಿದರೆ ಅರ್ಥಪೂರ್ಣವಾಗಲಿದೆ ಎಂದು ವಿನಂತಿಸಿರುವ ನಾಗರಿಕರು, ತಾಲೂಕಾಡಳಿತ ಸೌಧ ಆವರಣದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕಾದರೆ, ಈ ಪಾರಂಪರಿಕ ಕಟ್ಟಡ ಉಳಿಸಿ ಕಟ್ಟಡಗಳನ್ನು ನಿರ್ಮಿಸಿಕೊಳ್ಳಬೇಕು ಎಂದು ಒತ್ತಾಯಿಸಿ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.

ಈ ವೇಳೆ ಕಸಾಪ ಅಧ್ಯಕ್ಷ ವೀರೇಶ ಬಂಗಾರಶೆಟ್ಟರ್, ರೈತ ಸಂಘದ ಜಿಲ್ಲಾಧ್ಯಕ್ಷ ನಜೀರಸಾಬ ಮೂಲಿಮನಿ, ಪಾಂಡುರಂಗ ಆಶ್ರೀತ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ ಆಲಮೇಲು, ಕೃಷ್ಣಮೂರ್ತಿ ಟೆಂಗುಂಟಿ, ನಾಗರಾಜ ಬಡಿಗೇರ, ಮಹ್ಮದ್ ಅಫ್ತಾಬ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಇದ್ದರು.