ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕುಷ್ಟಗಿ : ಸಿರಿಧಾನ್ಯ ಆಹಾರ ಸೇವನೆ ಉತ್ತಮ ಆರೋಗ್ಯಕ್ಕೆ ಪೂರಕವಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಕಚೇರಿ ಕೃಷಿ ಅಧಿಕಾರಿ ಎಸ್.ಬಿ.ರಾಮೇನಹಳ್ಳಿ ಹೇಳಿದರು.
ಅವರು, ತಾಲೂಕಿನ ಜಾಲಿಹಾಳ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಸಿರಿಧಾನ್ಯಗಳ ಬೆಳೆಸುವ ಮತ್ತು ಉಳಿಸುವ ದೃಷ್ಟಿಯಿಂದ ಆಯೋಜಿಸಿದ್ದ ಜಾಗೃತಿ ಹಾಗೂ ಬೀಜ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಮಾಜಕ್ಕೆ ಉತ್ತಮ ಆರೋಗ್ಯವನ್ನು ಪರಿಚಯಿಸುವ ದೃಷ್ಟಿಯಿಂದ ಮತ್ತು ರೈತರ ಆದಾಯ ವೃದ್ದಿಸುವ ಉದ್ದೇಶದಿಂದ ರಾಜ್ಯದಲ್ಲಿ ಸಿರಿದಾನ್ಯ ಬೆಳೆಗೆ ಯೋಗ್ಯವಾದ 91ತಾಲೂಕುಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅದರಲ್ಲಿ ಕುಷ್ಟಗಿ ತಾಲೂಕನ್ನು ಸಹ ಒಂದಾಗಿದೆ. ಈ ಪ್ರಸಕ್ತ ವರ್ಷದಲ್ಲಿ ಅನುಕೂಲ ಆಗುವಂತೆ ಜಾಲಿಹಾಳ, ಹಿರೇ ಬನ್ನಿಗೋಳ, ಕೇಗೊನಾಳ ಗ್ರಾಮಗಳಲ್ಲಿ ಸುಮಾರು ನೂರಕ್ಕೂ ಹೆಚ್ಚು ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡು 350 ಕ್ಕೂ ಹೆಚ್ಚು ಎಕರೆ ಭೂಮಿಯಲ್ಲಿ ಸಿರಿಧಾನ್ಯ ಬೆಳೆಯಲು ರೈತರಿಗೆ ಈಗಾಗಲೇ ನವಣೆ, ಊದಲು, ಕೊರಲೇ, ಬರಗು, ಹಾರಕ, ಸಾಮೇ ಬೀಜ ವಿತರಿಸಿ ಬಿತ್ತನೆಗೆ ಉತ್ತೇಜಿಲಾಗಿದ್ದು, ಬಿತ್ತನೆ ಕಾರ್ಯ ನೆರವೇರಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿರಿಧಾನ್ಯ ಯೋಜನಾಧಿಕಾರಿ ಮತ್ತು ಕೃಷಿ ವಿಭಾಗದ ಉಮೇಶ್ ಶೆಟ್ಟಿ ಅವರು, ರೈತರಿಗೆ ಆರೋಗ್ಯ ವರ್ಧಕ ಬೆಸಾಯದ ಕ್ರಮ ಮತ್ತು ಅನುಪಾಲನೆಯ ಬಗ್ಗೆ ಮಾಹಿತಿ ನೀಡಿದರು.
ಈ ವೇಳೆ ತಾಲೂಕು ಕೃಷಿ ಮೇಲ್ವಿಚಾರಕ ಹಾಗೂ ವಲಯ ಮೇಲ್ವಿಚಾರಕ ಸೇವಾ ಪ್ರತಿನಿಧಿ, ಜಾಲಿಹಾಳ ಗ್ರಾಮದ ರೈತ ಮುಖಂಡರು, ರೈತ ಮಿತ್ರರು ಇದ್ದರು.