ಹಿರೇಮನ್ನಾಪೂರು | ಹೋಬಳಿ ಕೇಂದ್ರ ಸ್ಥಾಪನೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರವೇ ಪ್ರತಿಭಟನೆ

ಕೃಷಿಪ್ರಿಯ..
ಸುದ್ದಿ ಸಮರ್ಪಣ |

ಕುಷ್ಟಗಿ : ತಾಲೂಕಿನ ಹಿರೇಮನ್ನಾಪೂರ ಗ್ರಾಮದಲ್ಲಿ ಹೋಬಳಿ ಕೇಂದ್ರ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣ ಗೌಡ ಬಣ) ತಾಲೂಕು ಘಟಕ ಹಾಗೂ ಗ್ರಾಮ ಘಟಕದ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

ಗ್ರಾಮದ ಸಾರ್ವಜನಿಕ ಆಸ್ಪತ್ರೆಯಿಂದ ಬಸ್ ನಿಲ್ದಾಣದ ವರೆಗೂ ಜಾಥಾ ನಡೆಸಿದ ಕರವೇ ಕಾರ್ಯಕರ್ತರು, ರಾಜ್ಯ ಹೆದ್ದಾರಿಯಲ್ಲಿ ಕೆಲ ಹೊತ್ತು ಧರಣಿ ನಡೆಸಿದರು. ಬಳಿಕ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಶೃತಿ ಮಳ್ಳಪ್ಪಗೌಡರ ಅವರಿಗೆ ವಿವಿಧ ಬೇಡಿಕೆ ಗೆ ಸರ್ಕಾರ ವನ್ನು ಆಗ್ರಹಿಸಿ ಬರೆದ ಮನವಿ ಪತ್ರವನ್ನು ಸಲ್ಲಿಸಿದರು.

ಬಳಿಕ ಕರವೇ ಪ್ರಮುಖರು ಮಾತನಾಡಿ, ಹಿರೇಮನ್ನಾಪೂರ ಗ್ರಾಮ ಕೇಂದ್ರವಾಗಿಟ್ಟುಕೊಂಡು ಕಂದಾಯ ಹೋಬಳಿ ಕೇಂದ್ರ ರಚಿಸಬೇಕು. ಗ್ರಾಮ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೋಲಾರ್ ಮತ್ತು ಪವನ ವಿದ್ಯುತ್ ಕಂಪನಿಗಳ ಸಿ.ಎಸ್.ಆರ್. ಫಂಡ್ ಸಹಾಯ ಪಡೆದು ಗ್ರಾಮದ ಮುಖ್ಯರಸ್ತೆಗೆ ಬೀದಿ ದೀಪ ಅಳವಡಿಸಬೇಕು ಮತ್ತು ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕು. ಕುಷ್ಟಗಿ-ಸಿಂಧನೂರು ರಸ್ತೆ ಅಭಿವೃದ್ಧಿಗೆ ಕ್ರಮವಹಿಸಲು ತಾಲೂಕಾಡಳಿತವನ್ನು ಒತ್ತಾಯಿಸಿದರು.

ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಕಲ್ಪಿಸಿ ಸ್ವಚ್ಛತೆಗೆ ಮುಂದಾಗಬೇಕು. ಈಗಾಗಲೇ ನಿರ್ಮಿಸಿದ ಸುಸಜ್ಜಿತ ಕಟ್ಟಡಕ್ಕೆ ಗ್ರಂಥಾಲಯ ಸ್ಥಳಾಂತರಿಸಬೇಕು. ಕ್ರೀಡಾಂಗಣ, ಬಸ್ ನಿಲ್ದಾಣ ಬಳಿ ಮಹಿಳೆಯರು ಮತ್ತು ಪುರುಷರಿಗೆ ಹೈಟೆಕ್ ಶೌಚಾಲಯ ನಿರ್ಮಿಸಬೇಕು. ಸರ್ಕಾರಿ ಶಾಲೆಗಳ ಪರಿಸರ ಸ್ವಚ್ಛತೆ ಮತ್ತು ಮಕ್ಕಳಿಗೆ ಆಟದ ಮೈದಾನ ನಿರ್ಮಾಣ, ಅಪೂರ್ಣಗೊಂಡ ಜೆಜೆಎಂ ಕಾಮಗಾರಿ ಪೂರ್ಣಗೊಳಿಸಲು ತಾಲೂಕು ಪಂಚಾಯಿತಿ ಕ್ರಮಕೈಗೊಳ್ಳಬೇಕು.
ಶಾಲೆಗಳ ಕಟ್ಟಡ ದುರಸ್ತಿ, ಕುಡಿಯುವ ನೀರಿನ ಸೌಲಭ್ಯ, ದೈಹಿಕ ಶಿಕ್ಷಕರ ನಿಯೋಜನೆ ಸೇರಿದಂತೆ ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಮತ್ತು ವಸತಿ ಶಾಲೆ ಒದಗಿಸಲು ಶಿಕ್ಷಣ ಇಲಾಖೆ ಮುಂದಾಗಬೇಕು ಎಂದು ಒತ್ತಾಯಿಸಿದರು

ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ ಪರಿಸರ ಸ್ವಚ್ಛತೆಗೆ, ವೈದ್ಯಾಧಿಕಾರಿ ಸೇರಿ ಸಿಬ್ಬಂದಿ ಸಮಯಪಾಲನೆಗೆ ಕ್ರಮವಹಿಸಬೇಕು. ಆಂಬುಲೆನ್ಸ್ ವ್ಯವಸ್ಥೆ, ಪ್ರಯೋಗಾಲಯಕ್ಕೆ ಪರಿಕರಗಳು ಪೂರೈಕೆ, ಔಷಧ ಪೂರೈಕೆ ಜೊತೆಗೆ ಮತ್ತೊಬ್ಬ ವೈದ್ಯಾಧಿಕಾರಿ ನಿಯೋಜಿಸಬೇಕು. ಗ್ರಾಮಕ್ಕೆ ಮಂಜೂರಾದ ವಿದ್ಯುತ್ ಸ್ಟೇಷನ್ ಕಾಮಗಾರಿ ಆರಂಭಿಸಬೇಕು. ಮನೆಗಳ ಮೇಲೆ ಜೋತು ಬಿದ್ದಿರುವ ವಿದ್ಯುತ್ ತಂತಿ ದುರಸ್ತಿ ಮತ್ತು ಸ್ಥಳಾಂತರ ಸೇರಿದಂತೆ ಹಳೇ ಕಂಬ ಬದಲಾವಣೆಗೆ ಜೆಸ್ಕಾಂ ಅಧಿಕಾರಿಗಳು ಮುಂದಾಗಬೇಕು.

ಈ ಎಲ್ಲಾ ಬೇಡಿಕೆಗಳನ್ನು ಕೂಡಲೇ ಈಡೇರಿಸಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ ಗ್ರಾಮದ ಅಭಿವೃದ್ಧಿಗೆ ಕ್ರಮಕೈಗೊಳ್ಳಬೇಕು ಎಂದು ತಹಸೀಲ್ದಾರ್ ಶೃತಿ ಮಳ್ಳಪ್ಪಗೌಡರ್ ಅವರಿಗೆ ಮನವಿ ಮಾಡಿದ ಕರವೇ ಕಾರ್ಯಕರ್ತರು, ಗ್ರಾಮವನ್ನು ಕಂದಾಯ ಹೋಬಳಿ ಕೇಂದ್ರ ರಚನೆಗೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಿದರು.

ಈ ವೇಳೆ ಕರವೇ ಗ್ರಾಮ ಘಟಕ ಅಧ್ಯಕ್ಷ ಪರಸಪ್ಪ ಅಳ್ಳಳ್ಳಿ, ಉಪಾಧ್ಯಕ್ಷ ಮರಿಯಪ್ಪ ಮುಳ್ಳೂರು, ಕಾರ್ಯದರ್ಶಿ ಹುಸೇನಸಾಬ, ಭೀಮೇಷ ವಡ್ಡರ್, ತಾಲೂಕು ಘಟಕದ ಗೌರವಾಧ್ಯಕ್ಷ ಆದಪ್ಪ ಉಳ್ಳಾಗಡ್ಡಿ, ತಾಲೂಕು ಘಟಕ ಅಧ್ಯಕ್ಷ ಪ್ರಕಾಶ ಮನ್ನೇರಾಳ, ಉಪಾಧ್ಯಕ್ಷ ಚೆನ್ನಪ್ಪ ನಾಲಗಾರ, ಕಾರ್ಯದರ್ಶಿ ಶರಣು ನಾಯಕ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕ್ರೈಂ ಪಿಎಸ್’ಐ ಮಾನಪ್ಪ ವಾಲ್ಮೀಕಿ ಸೇರಿದಂತೆ ಗ್ರಾಮಸ್ಥರು, ಕರವೇ ಕಾರ್ಯಕರ್ತರು ಹಾಜರಿದ್ದರು.