ಕುಷ್ಟಗಿ | ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಇಟ್ಟುಕೊಂಡು ಸಾಧನೆ ಮಾಡಬೇಕು: ಶಾಸಕ ಡಿ.ಎಚ್. ಪಾಟೀಲ್

ಸುದ್ದಿ ಸಮರ್ಪಣ |

ಕುಷ್ಟಗಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಡಿಟೋರಿಯಂ ಹಾಲನಲ್ಲಿ ಸೋಮವಾರ 2023-24ನೇ ಸಾಲಿನ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಸಾಂಸ್ಕೃತಿಕ, ಕ್ರೀಡೆ, ರೆಡ್ ಕ್ರಾಸ್, ಸ್ಕೌಟ್ಸ್ ಹಾಗೂ ಗೈಡ್ಸ್ ಸಮಾರೋಪ ಸಮಾರಂಭ ನಡೆಯಿತು.

ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ, ಶಾಸಕ ದೊಡ್ಡನಗೌಡ ಪಾಟೀಲ್ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಇಟ್ಟುಕೊಂಡು ಸಾಧನೆ ಮಾಡಬೇಕು. ಸಾಧನೆ ಮಾಡಿದವರ ಇತಿಹಾಸ ಅರಿತುಕೊಳ್ಳಬೇಕು. ಸಾಧನೆ ಹಿಂದಿನ ರಹಸ್ಯಗಳು ಅರಿತುಕೊಳ್ಳುವ ಮೂಲಕ ಉನ್ನತ ಸಾಧನೆಗೆ ಪ್ರಯತ್ನಿಸಬೇಕು. ಜೊತೆಗೆ ಹೆತ್ತ ತಂದೆ-ತಾಯಿ ಹಾಗೂ ಜ್ಞಾನ ಕೊಟ್ಟ ಗುರುಗಳನ್ನು ಎಂದಿಗೂ ಮರೆಯಬಾರದು. ಅವರನ್ನು ಸದಾ ಗೌರವ ಭಾವನೆಯಿಂದ ಕಾಣಬೇಕು ಎಂದರು.

ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಶಿಕ್ಷಣದ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟಿದ್ದು, 2023-24ನೇ ಸಾಲಿನಲ್ಲಿ 21 ಕೋಟಿ ರೂ. ಅನುದಾನ ನೀಡಿದ್ದೇನೆ. ಮುಂಬರುವ ದಿನಗಳಲ್ಲಿ ಶಿಕ್ಷಣ ಕ್ಷೇತ್ರ ಹಾಗೂ ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಸ್ಯೆಗಳು ಹಾಗೂ ಅಭಿವೃದ್ಧಿಗೆ ಸ್ಪಂದಿಸುವುದಾಗಿ ಶಾಸಕ ದೊಡ್ಡನಗೌಡ ಪಾಟೀಲ್ ಅವರು ಭರವಸೆ ನೀಡಿದರು.

ಕೊಪ್ಪಳ ವಿವಿ ಪ್ರೋಫೆಸರ್ ಡಾ.ಪ್ರವೀಣ ಪೊಲೀಸ್ ಪಾಟೀಲ್ ಅವರು ವಿಶೇಷ ಉಪನ್ಯಾಸ ನೀಡಿದರು. ಇದೇವೇಳೆ ಜಪಾನಿನಲ್ಲಿ ನಡೆದ ಏಷ್ಯನ್ ಜಂಪರೋಪ ಚಾಂಪಿಯನ್ ಶಿಪ್ ಕ್ರೀಡಾಕೂಟದಲ್ಲಿ ಭಾರತದಿಂದ ಆಟವಾಡಿ 5ನೇ ಸ್ಥಾನಗಳಿಸಿ ಗಮನಾರ್ಹ ಸಾಧನೆ ಮಾಡಿದ ಕಾಲೇಜಿನ ಮಂಜುನಾಥ್ ಚೌಡ್ಕಿ, ಯುವ ಬರಹಗಾರ ಶರಣು ಗುಡದೂರು ಹಾಗೂ ಇತರರನ್ನು ಕಾಲೇಜು ವತಿಯಿಂದ ಗೌರವಿಸಲಾಯಿತು.

ಪ್ರಾಚಾರ್ಯ ಡಾ.ಎಸ್. ವಿ.ಡಾಣಿ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಕಾಲೇಜಿನ ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥೆ ವಿದ್ಯಾವತಿ ಗೋಟೂರು, ಪುರಸಭೆ ಸದಸ್ಯ ಗಂಗಾಧರ ಹಿರೇಮಠ, ಶಶಿಧರ ಕವಲಿ, ಉಪನ್ಯಾಸಕರಾದ ರತ್ನಾ ಬೆದವಟ್ಟಿ, ಭೀಮಣ್ಣ, ರಾಘವೇಂದ್ರ ಪತ್ತಾರ, ಶಿವರಾಜ್ ಬಂಡಿಹಾಳ, ಲಕ್ಷ್ಮಣ್ ಪೂಜಾರ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನಂತರ ಸಾಂಪ್ರದಾಯಿಕ ದೇಶೀಯ ಉಡುಗೆಯೊಂದಿಗೆ ಆಗಮಿಸಿದ್ದ ವಿದ್ಯಾರ್ಥಿ/ವಿದ್ಯಾರ್ಥಿನಿಯರ ಸಾಂಸ್ಕ್ರುತಿಕ ಕಾರ್ಯಕ್ರಮ ಗಮನ ಸೆಳೆಯಿತು.