ನವಣೆ ಬೆಳೆದು ಆದಾಯ ಕಂಡುಕೊಂಡ ಕುಷ್ಟಗಿ ರೈತ!

ಸಂಗಮೇಶ ಮುಶಿಗೇರಿ
ಸುದ್ದಿ ಸಮರ್ಪಣ |

ಕೊಪ್ಪಳ : ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ಕುಷ್ಟಗಿ ತಾಲೂಕಿನ ರೈತನೊಬ್ಬ ಸಿರಿಧಾನ್ಯ ಬೆಳೆಯಲ್ಲಿ ಆಸಕ್ತಿ ಹೊಂದಿ ಕಳೆದ ಮೂರು ವರ್ಷಗಳಿಂದ ನವಣೆ ಬೆಳೆದು ಆದಾಯ ವೃದ್ಧಿಸಿಕೊಂಡಿದ್ದು, ಇತರೆ ರೈತರಿಗೆ ಮಾದರಿಯಾಗಿದ್ದಾನೆ.

ಹೌದು.., ಜಿಲ್ಲೆಯ ಕುಷ್ಟಗಿ ತಾಲೂಕಿನ ಹನಮಸಾಗರ ಹೋಬಳಿ ವ್ಯಾಪ್ತಿಗೆ ಬರುವ ಮಲಕಾಪುರ ಗ್ರಾಮದ ಶಿವಪುತ್ರಯ್ಯ ಬಸಯ್ಯ ಹಿರೇಮಠ ಎಂಬುವವರು ನವಣೆ ಬೆಳೆದು ಅದರಲ್ಲಿ ಆದಾಯ ಕಂಡುಕೊಂಡಿದ್ದಾರೆ. ತನ್ನ 15 ಎಕರೆ ಪೈಕಿ ಒಂದುವರೆ ಎಕರೆ ಜಮೀನಿನಲ್ಲಿ ಕಳೆದ ವರ್ಷ ನವಣೆ ಬಿತ್ತನೆ ಮಾಡಿದ್ದರು. ಮಳೆ ಬಾರದಿದ್ದರೂ ಬರಗಾಲದಲ್ಲಿ ಸುಮಾರು ಏಳರಿಂದ ಎಂಟು ಕ್ವಿಂಟಾಲ್ ನವಣೆ ಬೆಳೆದಿದ್ದರು. ಕುಷ್ಟಗಿಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕ್ವಿಂಟಾಲಗೆ 6,700 ರೂಪಾಯಿ ಬೆಲೆ ಪಡೆದುಕೊಂಡಿದ್ದರು. ಸುಮಾರು 50 ಸಾವಿರ ಆದಾಯ ಗಳಿಸಿದ್ದರು.

ಪ್ರಸಕ್ತ ವರ್ಷ ಉತ್ತಮ ಮಳೆ ಬೀಳುತ್ತಿರುವುದರಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಇಳುವರಿ ಪಡೆಯುವ ನಿರೀಕ್ಷೆ ಹೊಂದಿ ತಮ್ಮ ಹದಿನೈದು ಎಕರೆ ಜಮೀನಿನಲ್ಲಿ 12 ಎಕರೆಯಷ್ಟು ಸಂಪೂರ್ಣ ನವಣೆ ಬೀಜವನ್ನೇ ಬಿತ್ತನೆ ಮಾಡಿದ್ದಾರೆ. ಸದ್ಯ ನವಣೆ ಬೆಳೆ ಸಮೃದ್ಧವಾಗಿ ಬೆಳೆದಿದ್ದು, ಉತ್ತಮವಾಗಿ ಬೀಜ ಕಟ್ಟಿದ ತೆನೆಗಳು ಮೈತುಂಬಿಕೊಂಡಿವೆ. ಹೊರಗಡೆ ಸಿಗುವ ಪಾಕೀಟ್ ಬೀಜಗಳನ್ನು ಖರೀದಿಸದ ರೈತ ಶಿವಪುತ್ರಯ್ಯ ಹಿರೇಮಠ, ಮನೆಯಲ್ಲಿ ಉತ್ತಮ ಬೀಜ ಸಂಗ್ರಹಿಸಿ ಬಿತ್ತನೆ ಮಾಡಿರುವುದು ವಿಶೇಷ.

ಸಿರಿದಾನ್ಯ ಬೆಳೆಗೆ ಆಕರ್ಷಿತನಾಗಿರುವ ರೈತ ಶಿವಪುತ್ರಯ್ಯ ಹಿರೇಮಠ, ರೈತರಿಗೆ ಮನೆ ಬೀಜ ಉಪಯೋಗಿಸಿಕೊಂಡು ಸಿರಿದಾನ್ಯ ಬೆಳೆ ಬೆಳೆಯುವಂತೆ ಇತರೆ ರೈತರಿಗೆ ಪ್ರಚೋದಿಸುತ್ತಿದ್ದಾರೆ. ಯಾವುದೇ ರಾಸಾಯನಿಕ ಔಷಧಿ ಹೆಚ್ಚು ಬಳಸದೇ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ತಂದುಕೊಡುವ ಸಿರಿದಾನ್ಯ ಬೆಳೆದು ಆದಾಯ ಮತ್ತು ಆರೋಗ್ಯ ವೃದ್ದಿಸಿಕೊಳ್ಳುವಂತೆ ಅಕ್ಕಪಕ್ಕದ ರೈತರಿಗೆ ಸಲಹೆ ನೀಡುತ್ತಿದ್ದಾರೆ.

ಸಿರಿದಾನ್ಯಕ್ಕೆ ಹೆಚ್ಚಿನ ಒತ್ತು ನೀಡಿ ಆದಾಯ ವೃದ್ದಿಸಿಕೊಳ್ಳುತ್ತಿರುವ ರೈತ ಶಿವಪುತ್ರಯ್ಯ ಹಿರೇಮಠ ಜಮೀನಿಗೆ ಕೃಷಿ ಇಲಾಖೆಯ ಹಿರಿಯ, ಕಿರಿಯ ಅಧಿಕಾರಿಗಳ ತಂಡ ಭೇಟಿ ನೀಡಿ ನವಣೆ ಬೆಳೆ ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಇಲಾಖೆಯಿಂದ ನಡೆಸುವ ಸಿರಿಧಾನ್ಯ ಮೇಳದಲ್ಲಿ ಭಾಗವಹಿಸಿ ಸಿರಿದಾನ್ಯ ಬೇಸಾಯ ಪದ್ಧತಿ, ಬೇಸಾಯ ಕ್ರಮಗಳ ಕುರಿತು ಮಾಹಿತಿ ನೀಡುವಂತೆ ಕೋರಿದ್ದಾರೆ.