ಬ್ರಹ್ಮಶ್ರೀ ನಾರಾಯಣಗುರು, ಮಾಜಿ ಸಿಎಂ ದೇವರಾಜ ಅರಸು ಜಯಂತಿ ಆಚರಣೆ

ಕೃಷಿಪ್ರಿಯ..

ಸುದ್ದಿ ಸಮರ್ಪಣ |

ಕುಷ್ಟಗಿ : ಮಾಜಿ ಸಿಎಂ ದಿ.ದೇವರಾಜ ಅರಸು ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯನ್ನು ಪಟ್ಟಣ ಸೇರಿ ತಾಲೂಕಿನ ಶಾಲಾ-ಕಾಲೇಜು ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಮಂಗಳವಾರ ಶ್ರದ್ಧಾ ಭಕ್ತಿಯಿಂದ ಸರಳವಾಗಿ ಆಚರಿಸಲಾಯಿತು.

ಪಟ್ಟಣದ ತಾಲೂಕಾಡಳಿತ ಕಚೇರಿಯಲ್ಲಿ ವಿಧಾನಸಭಾ ವಿಪಕ್ಷ ಮುಖ್ಯ ಸಚೇತಕರಾದ ಶಾಸಕ ದೊಡ್ಡನಗೌಡ ಪಾಟೀಲ್ ಅವರೊಂದಿಗೆ ತಹಸೀಲ್ದಾರ್ ಅಶೋಕ ಶಿಗ್ಗಾವಿ ಅವರು ಮಾಜಿ ಸಿಎಂ ದಿ.ದೇವರಾಜ ಅರಸು ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಬಳಿಕ ಮಾತನಾಡಿದ ಶಾಸಕ ದೊಡ್ಡನಗೌಡ ಪಾಟೀಲ್ ಅವರು ದೇವರಾಜ ಅರಸು ಅವರನ್ನು ಸಾಮಾಜಿಕ ನ್ಯಾಯದ ಹರಿಕಾರ ಎಂದು ಕರೆಯುತ್ತೇವೆ. ದೇವರಾಜ ಅರಸು ಕರ್ನಾಟಕದ ಅಪರೂಪದ ರಾಜಕಾರಣಿ. ಅರಸು ಬಡವರು, ಸಾಮಾಜಿಕ ನ್ಯಾಯದ ಪರವಾಗಿ ಇದ್ದರು. ಅರಸು ಅವರು ಅಧಿಕಾರಕ್ಕೆ ಬರುವವರೆಗು ಹಿಂದುಳಿದ ವರ್ಗದವರಿಗೆ ಮೀಸಲಾತಿ ಇರಲಿಲ್ಲ. ಹಾವನೂರು ಆಯೋಗ ವರದಿ ತರಿಸಿ ಮೀಸಲಾತಿ ಜಾರಿ‌ ಮಾಡಿದರು ಎಂದರು. ಅದೇರೀತಿ ಕೇರಳದಲ್ಲಿ ಜನಿಸಿದ ಸಮಾಜ ಸುಧಾರಕರಲ್ಲಿ ಒಬ್ಬರಾಗಿದ್ದ ನಾರಾಯಣ ಗುರು ಅವರು ಜಾತಿ ತಾರತಮ್ಯ ನಿವಾರಿಸಿ ಸಮಾನತೆ ತರಲು ಚಳವಳಿ ರೂಪಿಸಿದರು. ಗುರುಗಳ ತತ್ವ ಮತ್ತು ಆದರ್ಶ ಅಳವಡಿಸಿಕೊಳ್ಳಬೇಕು ಎಂದರು.ಬಳಿಕ ಸದ್ಭಾವನಾ ದಿನಾಚರಣೆಯ ಪ್ರತಿಜ್ಞೆ ವಿಧಿಯನ್ನು ಬೋಧಿಸಿದರು.

ಈ ಸಂದರ್ಭದಲ್ಲಿ ಕಂದಾಯ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಈಡಿಗ ಸಮುದಾಯದ ಪ್ರಮುಖರಾದ ಸುಕರಾಮಪ್ಪ ಈಳಗೇರ, ಉಮಕಾಂತಗೌಡ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಅದೇರೀತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲ ಡಾ.ಎಸ್.ವಿ. ಡಾಣಿ ಅವರು ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳೊಂದಿಗೆ ಮಾಜಿ ಸಿಎಂ ದಿ.ದೇವರಾಜ ಅರಸು ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಅವರ ಭಾವಚಿತ್ರ ಪೂಜಿಸಿ ಪುಶ್ಪಾರ್ಪಣೆ ಮಾಡಿ ಗೌರವಿಸಿದರು.

ಅದೇ ರೀತಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾಯೋಜನೆ ಹಾಗೂ ಕಾಲೇಜು ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ ಹಾಗೂ ದೇವರಾಜ ಅರಸು ಅವರ ಜಯಂತಿ ಸರಳವಾಗಿ ಆಚರಿಸಲಾಯಿತು. ಬಳಿಕ ರಾಷ್ಟ್ರೀಯ ಸೇವಾಯೋಜನೆ ಕಾರ್ಯಕ್ರಮ ಅಧಿಕಾರಿ ಡಾ. ನಾಗರಾಜ ಹೀರಾ ಅವರು ವಿದ್ಯಾರ್ಥಿಗಳಿಗೆ ಸದ್ಭಾವನಾ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ವೇಳೆ ಪ್ರಾಚಾರ್ಯ ಪಿ.ಮಾಲಾ, ಉಪನ್ಯಾಸಕರು, ವಿದ್ಯಾರ್ಥಿನಿಯರು ಹಾಜರಿದ್ದರು.