ಸಂಗಮೇಶ ಮುಶಿಗೇರಿ..
ಕುಷ್ಟಗಿ : ಪ್ರವಾದಿ ಮಹ್ಮದ್ ಪೈಗಂಬರ್ ಅವರ ಜನ್ಮದಿನದ ಪ್ರಯುಕ್ತ ಜಮಾತೆ -ಎ- ಇಸ್ಲಾಮಿ ಹಿಂದ್ ವತಿಯಿಂದ ನ್ಯಾಯದ ಹರಿಕಾರ ಪ್ರವಾದಿ ಮಹ್ಮದ್ ಎಂಬ ಶೀರ್ಷಿಕೆ ಯಡಿ ಅವರ ಜೀವನದ ವಿವಿಧ ಮಗ್ಗಲುಗಳನ್ನು ಆಧರಿಸಿ ಬರೆದಿರುವ ಪುಸ್ತಕಗಳನ್ನು ಓದುಗರಿಗೆ ತಲುಪಿಸಲು ರಾಜ್ಯಾದ್ಯಂತ ಅಭಿಯಾನ ಹಮ್ಮಿಕೊಂಡಿದ್ದು, ಅದರಂತೆ ಪಟ್ಟಣದಲ್ಲಿ ಸಂಘಟನೆಯ ಪ್ರಮುಖರು ಓದುಗರ ಹುಡುಕಾಟದಲ್ಲಿ ತೊಡಗಿಕೊಂಡಿದ್ದಾರೆ.
ಶಾಂತಿ ಪ್ರಕಾಶನದಿಂದ ಪ್ರಕಟವಾಗಿರುವ ಭಾರತೀಯ ಸಮಾಜದಲ್ಲಿ ಪ್ರವಾದಿ ಮಹ್ಮದರ ಆದರ್ಶದ ಔಚಿತ್ಯ ಮತ್ತು ಪ್ರವಾದಿ ಮಹ್ಮದರನ್ನು ಅರಿಯಿರಿ ಎಂಬ ಈ ಎರಡೂ ಕೃತಿಗಳೊಂದಿಗೆ ಪಟ್ಟಣದಲ್ಲಿ ಪುಸ್ತಕ ಓದುವಿಕೆ ಆಸಕ್ತ ಮಿತ್ರರನ್ನು ಭೇಟಿ ನೀಡಿ ವಿತರಿಸುತ್ತಿದ್ದಾರೆ.
ಶನಿವಾರ, ಹಿರಿಯ ಪತ್ರಕರ್ತರಾದ ಮುಖೇಶ ನಿಲೋಗಲ್ ಹಾಗೂ ಮಂಜುನಾಥ್ ಮಹಲಿಂಗಪೂರ ಅವರನ್ನು ಭೇಟಿ ಮಾಡಿದ ಜಮಾತೆ -ಎ- ಇಸ್ಲಾಮಿ ಹಿಂದ್ ಪ್ರಮುಖರಾದ ಮಹ್ಮದ್ ಅಶ್ರಫ್ ಪವನ, ಮಹಿಬೂಬ ಹುರಕಡ್ಲಿ(ಕ್ವಾಲಿಟಿ), ಶಿಕ್ಷಕ ಅಲ್ತಾಫ್ ಹುಸೇನ ಮುಜಾವರ ಅವರು ಪೈಗಂಬರ್ ವಿಚಾರಗಳ ವಿಶ್ಲೇಷಣೆಯ ಮಹತ್ವದ ಪುಸ್ತಕಗಳನ್ನು ತಲುಪಿಸಿದರು.
ಈ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಪ್ರತಿ ವರ್ಷ ಪ್ರವಾದಿ ಮಹ್ಮದ್ ಪೈಗಂಬರ್ ಅವರ ಜನ್ಮದಿನದ ಪ್ರಯುಕ್ತ ಅವರ ಜೀವನ ತತ್ವಾದರ್ಶಗಳು ಒಳಗೊಂಡಿರುವ ಕೃತಿಗಳನ್ನು ಸಮಾಜಕ್ಕೆ ತಲುಪಿಸುವ ಕಾರ್ಯ ಮಾಡುತಿದ್ದೇವೆ. ಪ್ರಸ್ತುತ ಮನುಷ್ಯ ಮನುಷ್ಯನ ನಡುವೆ ನಂಬಿಕೆ ಕಳೆದುಕೊಳ್ಳುತ್ತಿರುವುದು, ಅನ್ಯಾಯ, ಅಧರ್ಮ ಹೆಚ್ಚಾಗುತ್ತಿರುವುದರಿಂದ ಸಮಾಜ ಹದಗೆಡುತ್ತಿದೆ. ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪ್ರವಾದಿ ಮಹ್ಮದ್ ಫೈಗಂಬರ್ ಸೇರಿದಂತೆ ಶರಣರು, ದಾರ್ಶನಿಕರ ಸಂದೇಶಗಳ ಚಿಂತನ -ಮಂಥನ ಅಗತ್ಯವಿದೆ. ಜೊತೆಗೆ ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ. ಈ ನಿಟ್ಟಿನಲ್ಲಿ ಭಾರತೀಯ ಸಮಾಜದಲ್ಲಿ ಪ್ರವಾದಿ ಮಹ್ಮದ ಪೈಗಂಬರ್ ರ ಆದರ್ಶದ ಔಚಿತ್ಯ ಮತ್ತು ಪ್ರವಾದಿ ಮಹ್ಮದರನ್ನು ಅರಿಯಿರಿ ಎಂಬ ಈ ಎರಡೂ ಕೃತಿಗಳೊಂದಿಗೆ ಪುಸ್ತಕ ಓದುವ ಆಸಕ್ತರನ್ನು ಭೇಟಿ ನೀಡಿ ವಿತರಿಸುತಿದ್ದೇವೆ ಎಂದು ಹೇಳಿದರು.