ಕೊಪ್ಪಳ : ನಗರದ ರೈಲ್ವೆ ನಿಲ್ದಾಣದಲ್ಲಿ ರಾಷ್ಟ್ರಧ್ವಜ ವಿಲ್ಲದೆ ‘ಬೃಹತ್ ಸ್ತಂಭ’ ಬಣಗುಡುತ್ತಿರುವುದನ್ನು ಕಂಡ ಇಲ್ಲಿನವರು ಧ್ವಜಾರೋಹಣಕ್ಕಾಗಿ ಒತ್ತಾಯಿಸಿದ್ದಾರೆ..! ನಿಲ್ದಾಣದ ಆವರಣದಲ್ಲಿರುವ ಬೃಹತ್ತಾದ ಸ್ತಂಭದ ಮೇಲ್ಭಾಗದಲ್ಲಿ ನಿತ್ಯ ಹಾರಾಡಬೇಕಾಗಿದ್ದ ವಿಶಾಲವಾದ ತ್ರಿವರ್ಣ ಧ್ವಜ ನೋಡುಗರಿಗೆ ಇಂದು ಇಲ್ಲದಂತಾಗಿದೆ. ರಾಷ್ಟ್ರ ಧ್ವಜಾರೋಹಣ ಇಲ್ಲದೆ, ಇಲ್ಲಿನ ಬೃಹತ್ ಧ್ವಜ ಸ್ತಂಭವು ಬಣಗುಡುವಂತಾಗಿದೆ. ಪ್ರಮುಖ ನಗರಗಳಲ್ಲಿನ ರೈಲ್ವೆ ನಿಲ್ದಾಣಗಳಲ್ಲಿ ರಾಷ್ಟ್ರ ಧ್ವಜಾರೋಹಣಕ್ಕೆ ರೈಲ್ವೆ ಇಲಾಖೆ ಮುಂದಾಗಿರುವುದು ದೇಶದ ಹೆಮ್ಮೆಯ ಸಂಗತಿ. ಅದರಂತೆ ಕೊಪ್ಪಳದ ರೈಲ್ವೆ ನಿಲ್ದಾಣದಲ್ಲಿ ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ಬೃಹತ್ ಧ್ವಜ ಸ್ತಂಭವನ್ನು ಕೂಡಾ ಅಳವಡಿಸಿದೆ. ಆದರೆ, ಇಂತಹ ವಿಶಿಷ್ಟ ಸ್ತಂಭದಲ್ಲಿ ಕಳೆದ ಅಗಷ್ಟ ತಿಂಗಳ ಅಂತ್ಯದವರೆಗೆ ವಿಶಾಲವಾದ ರಾಷ್ಟ್ರ ಧ್ವಜ ಹಾರಾಡುತ್ತಿತ್ತು. ಆದರೆ, ಇತ್ತೀಚೆಗೆ ಧ್ವಜದ ಹಾರಾಟ ಕೂಡಾ ನಿಂತು ಹೋಗಿದೆ. ಅಖಂಡತೆ ಜೊತೆಗೆ ದೇಶಾಭಿಮಾನ ಸಾರುವ ರಾಷ್ಟ್ರ ಧ್ವಜಾರೋಹಣಕ್ಕೆ ಇಲಾಖೆ ಕೂಡಲೇ ಮುಂದಾಗಬೇಕೆಂಬುದು ಸ್ಥಳೀಯರ ಒತ್ತಾಸೆಯಾಗಿದೆ..!!