– ಕಾಂಗ್ರೆಸ್ ಗೆ ಪ್ರಬಲ ಸ್ಪರ್ಧಿ ಎಸ್.ಟಿ.ಪಾಟೀಲ..!

– ಶರಣಪ್ಪ ಕುಂಬಾರ.

ಬಾಗಲಕೋಟೆ : ವಿಜಯಪುರ-ಬಾಗಲಕೋಟೆ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ಜರುಗುವ ವಿಧಾನ ಪರಿಷತ್ ಚುನಾವಣೆಗೆ ಪ್ರಬಲ ಆಕಾಂಕ್ಷಿಯಾಗಿರುವ ಬಾಗಲಕೋಟೆ ಜಿಲ್ಲಾ ಬಿಜೆಪಿ ಹಾಲಿ ಅಧ್ಯಕ್ಷ ಎಸ್.ಟಿ.ಪಾಟೀಲರಿಗೆ ಕಮಲ ಪಕ್ಷದ ಟಿಕೆಟ್ ಪಕ್ಕಾ ಆಗುವುದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ..!?
    ವಿಜಯಪುರ-ಬಾಗಲಕೋಟೆ ಜಿಲ್ಲೆಗಳ ಎರಡು ಪರಿಷತ್ ಸ್ಥಾನಗಳಿಗೆ ಚುನಾವಣೆ ಘೋಷಣೆಯಾದ ಬೆನ್ನಲ್ಲೆ ಭಾರತೀಯ ಜನತಾ ಪಕ್ಷದ ಟಿಕೆಟ್ ಗೆ ಬಾರಿ ಪೈಪೋಟಿ ಏರ್ಪಟ್ಟಿರುವುದು ವಿಶೇಷ. ಸಂಘಟನೆಗೆ ಹೆಸರಾಗಿರುವ ಬಾಗಲಕೋಟೆ ಜಿಲ್ಲಾ ಬಿಜೆಪಿ ಹಾಲಿ ಅಧ್ಯಕ್ಷ ಎಸ್.ಟಿ.ಪಾಟೀಲರ ಹೆಸರು ಕೂಡಾ ಸಾಕಷ್ಟು ಮುಂಚೂಣಿಯಲ್ಲಿದೆ. ಅಲ್ಲದೆ, ವಿಜಯಪುರ ಜಿಲ್ಲಾ ಬಿಜೆಪಿ ಹಾಲಿ ಅಧ್ಯಕ್ಷ ಆರ್.ಎಸ್.ಪಾಟೀಲ ಕೊಚಬಾಳ, ಬಾಗಲಕೋಟೆ ಮಾಜಿ ಶಾಸಕ ಪಿ.ಹೆಚ್.ಪೂಜಾರ ಹಾಗೂ ಯುವ ಮುಖಂಡ ಸಿ.ಎಸ್.ಬೆಳ್ಳುಬ್ಬಿ ಸೇರಿದಂತೆ ಇನ್ನಿತರ ಹೆಸರುಗಳು ಟಿಕೆಟ್ ಗಾಗಿ ಸುಳಿದಾಡುತ್ತಿವೆ. ಆದರೆ, ಈ ನಾಲ್ವರ ಪೈಕಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಜಾಲಿಹಾಳ ಗ್ರಾಮದ ಸಂಘಟನಾ ಚತುರನಾಗಿರುವ ಎಸ್.ಟಿ.ಪಾಟೀಲರ (ಶಾಂತಗೌಡ) ಹೆಸರು ಮಾತ್ರ ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿದೆ.

ಸಿದ್ದರಾಮಯ್ಯಗೆ ಟಾಂಗ್ : ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಹಾಗೂ ಬಾದಾಮಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯನವರಿಗೆ ಮುಂದಿನ 2023 ರ ವಿಧಾನಸಭಾ ಚುನಾವಣೆಯಲ್ಲಿ ಟಾಂಗ್ ಕೊಡುವ ಭವಿಷ್ಯದ ಲೆಕ್ಕಾಚಾರ ಕೂಡಾ ಬಿಜೆಪಿಯದ್ದಾಗಿದೆ. ಅದಕ್ಕಾಗಿಯೇ ಬಾದಾಮಿ ವಿಧಾನಸಭಾ ಕ್ಷೇತ್ರದ ಜಾಲಿಹಾಳ ಗ್ರಾಮದವರಾದ ಎಸ್.ಟಿ.ಪಾಟೀಲ (ಶಾಂತಗೌಡ) ಅವರಿಗೆ ಈ ಬಾರಿಯ ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ನೀಡುವ ಮೂಲಕ  ‘ಗಾಣಿಗ’ ಸಮುದಾಯದ ಮತ ಬ್ಯಾಂಕ್ ಗಟ್ಟಿಗೊಳಿಸಿಕೊಂಡು ಹೇಗಾದರೂ ಮಾಡಿ ಸಿದ್ದರಾಮಯ್ಯನವರಿಗೆ ಸೋಲಿನ ರುಚಿ ತೊರಿಸುವ ಇರಾದೆ ಕೆಸರಿಪಡೆಯದ್ದು. ರಾಜ್ಯದ ಒಟ್ಟು 25 ವಿಧಾನ ಪರಿಷತ್ ಸ್ಥಾನಗಳಿಗೆ ಜರಗುವ ಚುನಾವಣೆಯಲ್ಲಿ ವಿಶೇಷವಾಗಿ ವಿಜಯಪುರ-ಬಾಗಲಕೋಟೆ ಎರಡು ಪರಿಷತ್ ಸ್ಥಾನಗಳ ಮೇಲೆ ಬಿಜೆಪಿ ಕಣ್ಣು ಇಟ್ಟಿದೆ. 

ಗೆಲ್ಲುವ ಕುದುರೆ : ತಮ್ಮ 25 ವರ್ಷಗಳ ರಾಜಕೀಯ ಜೀವನದಲ್ಲಿ ಯಾವುದೇ ಕಳಂಕ ಮುಕ್ತರಾಗಿರುವ (ಎಸ್.ಟಿ.ಪಾಟೀಲ) ಶಾಂತಗೌಡರು ಹೆಸರಿನಂತೆ ಪ್ರಶಾಂತರು. ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ತಳಮಟ್ಟದಿಂದ ತಮ್ಮ ರಾಜಕೀಯ ಜೀವನ ಆರಂಭಿಸಿದ್ದಾರೆ. ಈಗಾಗಲೇ ಎರಡು ಬಾರಿ ಬಾದಾಮಿ ಮಂಡಲ ಬಿಜೆಪಿ ಅಧ್ಯಕ್ಷರಾಗಿ ಪಕ್ಷವನ್ನು ಸಂಘಟಿಸುವ ಮೂಲಕ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಎಸ್.ಟಿ.ಪಿ ಅವರು ಈ ಸದ್ಯ ಬಾಗಲಕೋಟೆ ಜಿಲ್ಲಾ ಬಿಜೆಪಿ ಹಾಲಿ ಕ್ರಿಯಾಶೀಲ ಅಧ್ಯಕ್ಷರು ಕೂಡಾ ಹೌದು. ಬಾಗಲಕೋಟೆ-ವಿಜಯಪೂರ ಎರಡು ಜಿಲ್ಲೆಗಳ ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟಿರುವ ಪಕ್ಷಕ್ಕೆ ಎಸ್.ಟಿ.ಪಾಟೀಲ ಎಂಬ ‘ಗೆಲ್ಲುವ ಕುದುರೆ’ಗೆ ಪಕ್ಷ ಟಿಕೇಟ್ ನೀಡುವುದನ್ನು ಪಕ್ಕಾ ಮಾಡಿಕೊಂಡಿರುವುದು ಗುಟ್ಟಾಗಿ ಉಳಿದಿಲ್ಲ.

ಮಾಸ್ ಲೀಡರ್ : ಕೇವಲ ಗಾಣಿಗ ಸಮುದಾಯಕ್ಕೆ ಮಾತ್ರ ಲೀಡರ್ ಆಗದಿರುವ ಎಸ್.ಟಿ.ಪಾಟೀಲ ಸರ್ವ ಸಮುದಾಯದ ನಾಯಕ. ಎಲ್ಲ ಸಮುದಾಯಗಳ ನಾಯಕರುಗಳ ಪಾಲಿಗೆ ‘ಪ್ರಿಯ’ನಾಗಿರುವ ಎಸ್.ಟಿ.ಪಿ ಮಾಸ್ ಲೀಡರ್ ಆಗಿ ಜಿಲ್ಲೆಯ ತುಂಬೆಲ್ಲಾ ಹೆಸರುವಾಸಿ ನಾಯಕ. ಬಾದಾಮಿ ಮಂಡಲದ ಸತತವಾಗಿ ಎರಡು ಬಾರಿ ಅಧ್ಯಕ್ಷರಾಗಿ ಪಕ್ಷ ಸಂಘಟಿಸಿರುವುದು ಕೇವಲ ಜಿಲ್ಲೆಗಷ್ಟೆ ಅಲ್ಲ , ಇಡೀ ರಾಜ್ಯಕ್ಕೆ ಎಸ್.ಟಿ.ಪಿ ಚಿರಪರಿಚಿತರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹಾಲಿ ಸಚಿವ ಶ್ರೀರಾಮಲು ಅವರ ನಡುವೆ ಜರುಗಿದ ಮಹಾ ಫೈಟನಲ್ಲಿ ಸಾಕಷ್ಟು ಶ್ರಮಿಸುವ ಮೂಲಕ ತಮ್ಮದೇ ಆದ ಹೆಸರು ಮಾಡಿದವರು. ಇದೆ ಚುನಾವಣೆ ಮೂಲಕ  ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ಸಚಿವರಾದ ಗೋವಿಂದ ಕಾರಜೋಳ, ಮುರಗೇಶ ನಿರಾಣಿ, ಸಂಸದರಾದ ರಮೇಶ ಜಿಗಜಿಣಗಿ, ಪಿ.ಸಿ.ಗದ್ದಿಗೌಡರ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಎ.ಎಸ್.ಪಾಟೀಲ ನಡಹಳ್ಳಿ, ವೀರಣ್ಣ ಚರಂತಿಮಠ, ದೊಡ್ಡನಗೌಡ ಪಾಟೀಲ ಲೆಕ್ಕಿಹಾಳ, ವೀರೇಶ ಭೂಸನೂರು, ಮಾಜಿ ಸಚಿವರಾದ ಲಕ್ಷ್ಮಣ ಸವದಿ, ಎಸ್.ಕೆ.ಬೆಳ್ಳುಬ್ಬಿ , ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಲ್ಲದೆ, ಕೇಂದ್ರ ನಾಯಕರಿಗೆ ಶಾಂತಗೌಡರು (ಎಸ್.ಟಿ.ಪಿ) ಚಿರಪರಿತರಾದವರು. ಅಲ್ಲದೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಜೊತೆಗೆ ಕೂಡಾ ನಿಕಟವಾದ ಸಂಪರ್ಕ ಸಾಧಿಸಿದ್ದಾರೆ. ಅಲ್ಪ ಅವಧಿಯಲ್ಲಿಯೇ ಪಕ್ಷವನ್ನು ಮುನ್ನಲೆಗೆ ತರುವ ಮೂಲಕ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡ ನಾಯಕರ ಸಾಲಿನಲ್ಲಿ ಎಸ್.ಟಿ.ಪಾಟೀಲ ನಿಲ್ಲುತ್ತಾರೆ. ಇಂತಹ ನಾಯಕನಿಗೆ ಪಕ್ಷ ಟಿಕೆಟ್ ನೀಡಿದ್ದಾದರೆ, ಗೆಲುವು ಖಚಿತ ಎಂಬ ಮಾತುಗಳು ಅವಳಿ ಜಿಲ್ಲೆಗಳ ಕಮಲ ಪಕ್ಷದ ಬಹುತೇಕ ಕಾರ್ಯಕರ್ತರಿಂದ ಕೇಳಿಬರುತ್ತಿವೆ..!!