ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಸ್ಥಳೀಯ ಸಂಸ್ಥೆಗಳ ಸದಸ್ಯರಿಗೆ ಈ ಸಂದರ್ಭದಲ್ಲಿ ಎಲ್ಲಿಲ್ಲದ ಡಿಮಾಂಡ್ ಅಂದರೆ ತಪ್ಪಾಗಲಿಕ್ಕಿಲ್ಲ..!
ಪ್ರತಿ 6 ವರ್ಷಗಳಿಗೊಮ್ಮೆ ಖಾಲಿಯಾಗುವ ಶಾಶ್ವತ ಸದನವಾದ ವಿಧಾನ ಪರಿಷತ್ ಗೆ ಸ್ಥಳೀಯ ಸಂಸ್ಥೆಗಳಿಂದ 25 ಜನ ಸದಸ್ಯರ ಆಯ್ಕೆಗಾಗಿ ರಾಜ್ಯದಲ್ಲಿ ಮತ್ತೊಮ್ಮೆ ಚುನಾವಣೆ ಎದುರಾಗಿದೆ. ಈ ಸಂದರ್ಭದಲ್ಲಿ ಮತದಾನದ ಅರ್ಹತೆ ಪಡೆದಿರುವ ಸ್ಥಳೀಯ ಸಂಸ್ಥೆಗಳ ಸದಸ್ಯರಿಗೆ ಏಲ್ಲಿಲ್ಲದ ಡಿಮಾಂಡೊಪ್ಪೋ ಡಿಮಾಂಡ್ ಅಂದ್ರೆ ತಪ್ಪಾಗಲಾರದು. ಅತಿ ಹೆಚ್ಚು ಮತದಾನದ ಅರ್ಹತೆ ಪಡೆದಿರುವ ಗ್ರಾಮ ಪಂಚಾಯತಿ ಸದಸ್ಯರ ಖುಷಿಗೆ ಈ ಸದ್ಯ ಮಿತಿಯೇ ಇಲ್ಲ. ಚುನಾಯಿತರಾಗಿ ಆಯ್ಕೆಯಾಗಿ ಇನ್ನೂ ಒಂದು ವರ್ಷ ಕಳೆದಿಲ್ಲ ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಇಡಿ ಗಂಟು ಪಡೆದು, ಆಯ್ಕೆಗೆ ಹಸಿರು ನಿಶಾನೆ ತೊರಿಸಿದವರ ಪಾಲಿಗೆ ಮತ್ತೊಮ್ಮೆ ಹಣದ ಹೊಳೆ ಎದುರಾಗಿದೆ. ಕೋಟಿ ಕೋಟಿ ಹಣ ಸುರಿದು ವಿಧಾನ ಪರಿಷತ್ತಿಗೆ ಆಯ್ಕೆಯಾಗಬೇಕೆಂಬ ಕನಸು ಹೊತ್ತವರಿಗೆ ಗ್ರಾಮ ಪಂಚಾಯತಿ ಸದಸ್ಯರೇ ಮೂಲಾಧಾರ. ಸೀಮಿತ ಮತದಾರರನ್ನು ಹೊಂದಿದ ಈ ಪರಿಷತ್ ಚುನಾವಣೆಯಲ್ಲಿ ಸದಸ್ಯರ ಬಳಿ ಬಂದು, ಆಯಾ ಪಕ್ಷದ ಹಿರಿಯಮುಖಂಡರುಗಳೇ ಹಣ ತಲುಪಿಸುವುದು ನಡೆದು ಬಂದಿರುವ ರಾಜಕೀಯ ಪರಂಪರೆ. ಸ್ಥಿತಿವಂತರಿಗಾಗಿಯೇ ಮೀಸಲಾಗಿರುವ ಚುನಾವಣೆಯಲ್ಲಿ ಹಣದ ಸಪ್ಪಳ ಮಾತ್ರ ಜೋರಾಗಿ ನಡೆದಿದೆ. ಕಳೆದ ಚುನಾವಣೆಯಲ್ಲಿ ಮತವೊಂದಕ್ಕೆ 25 ಸಾವಿರ ರೂಪಾಯಿಗಳನ್ನು ಹಂಚಿದ ಸಪ್ಪಳ ಪೈಪೋಟಿವೊಡ್ಡಿದವರ ಮನಸ್ಸಿನಿಂದ ಇನ್ನೂ ಮಾಸಿಲ್ಲ. ಮತ್ತೊಮ್ಮೆ ಎದುರಾಗಿರುವ ಈ ಚುನಾವಣೆಯಲ್ಲಿ ಕುರುಡ ಕಾಂಚನಾ ಲಗಾಮ ಇಲ್ಲದೆ ಕುಣಿಯುತ್ತಿದೆ.
ಅಲ್ಲದೆ, ಈ ಚುನಾವಣೆಯಲ್ಲಿ ಹಣದ ಬದಲಾಗಿ ‘ಬಂಗಾರ’ ಹಂಚಬೇಕೆಂಬುದು ಕಣದಲ್ಲಿರುವ ಅಭ್ಯರ್ಥಿಗಳ ಇರಾದೆ ಕೂಡಾ ಹೌದಾಗಿತ್ತು. ಬದಲಾಗಿ ಎರಡು ರಾಷ್ಟ್ರೀಯ ಪಕ್ಷಗಳು ಮತದಾರರಿಗೆ ಹಣ ಹಂಚಿ, ಮತಗಳ ಬೇಟಿಯಲ್ಲಿ ಸ್ಥಳೀಯ ನಾಯಕರು ಬ್ಯೂಜಿಯಾಗಿದ್ದಾರೆ.
ಮತದಾನ ಮಾಡುವ ತವಕಕ್ಕಿಂತ ಹಣ ಪಡೆಯಬೇಕು ಎಂಬ ಕನವರಿಕೆಯಲ್ಲಿ ಸ್ಥಳೀಯ ಸಂಸ್ಥೆಗಳ ಸದಸ್ಯರು ಇದ್ದಾರೆ. ಲಾಭಿ ಮಾಡಿಯಾದರು ಕಾಂಗ್ರೆಸ್ ಮತ್ತು ಬಿಜೆಪಿ ಎರಡು ರಾಷ್ಟ್ರೀಯ ಪಕ್ಷಗಳಿಂದ ಹಣ ಗಿಟ್ಟಿಸಿಕೊಳ್ಳಲೇಬೇಕೆಂಬ ‘ಎರಡು ಕನಸಿ’ ನಲ್ಲಿ ಕೆಲವರಿದ್ದಾರೆ. ಕೋಟ್ಯಾಂತರ ರೂಪಾಯಿಗಳನ್ನು ಸುರಿದ ‘ಬುದ್ದಿವಂತರ ಚಾವಡಿ’ ಗೆ (ವಿಧಾನ ಪರಿಷತ್ತಿಗೆ) ಆಯ್ಕೆಯಾಗುವ ಸದಸ್ಯರಂತು ರಾಜ್ಯದ ಸಮಗ್ರ ಅಭಿವೃದ್ಧಿ ಕನಸುಗಳನ್ನು ಹೊತ್ತುಕೊಂಡು ಹೋಗುದಂತು ಸುಳ್ಳಿನ ಮಾತು. ಹಾಗಾದರೆ, ವಿಧಾನ ಪರಿಷತ್ ನಲ್ಲಿ ತೀವ್ರ ಚರ್ಚೆ ನಡೆದು, ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕವಾದ ಮಸೂದೆಗಳು ಜಾರಿಗೆ ಬರುವುದಂತು ಕನಸಿನ ಮಾತು..!!