ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್|
ಕೊಪ್ಪಳ (ಕುಷ್ಟಗಿ) : ಮೊದಲನೇ ಹಾಗೂ ಎರಡನೇ ಕೋವಿಡ್ ವ್ಯಾಕ್ಸಿನೇಷನ್ ಪಡೆಯದೇ ಇರುವ ಅಂಗಡಿಕಾರರು ಹಾಗೂ ಕೆಲಸಗಾರರು ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆಯದಿದ್ದರೆ ಅಂಗಡಿಗಳನ್ನು ಮುಚ್ಚಿಸಿ ವ್ಯಾಪಾರ ಬಂದ್ ಮಾಡುವ ಎಚ್ಚರಿಕೆ ನೀಡುವ ಮೂಲಕ ಆರೋಗ್ಯ ಸಿಬ್ಬಂದಿ ಲಸಿಕೆ ನೀಡುತ್ತಿರುವುದು ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಕಂಡುಬಂದಿತು..!
ಜಿಲ್ಲೆಯಲ್ಲಿ ಶೇ.100 ಕೋವಿಡ್‌ಲಸಿಕೆ ಅಭಿಯಾನ ನಡೆಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರ ಆದೇಶದ ಮೇರೆಗೆ ತಾಲೂಕು ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಪಟ್ಟಣದೆಲ್ಲೆಡೆ ಹೋಟೆಲ್, ಬಟ್ಟೆ ಅಂಗಡಿ, ಗ್ಯಾರೇಜ್, ಝರಾಕ್ಸ್, ಮೊಬೈಲ್ ಶಾಪ್, ಎಲೆಕ್ಟ್ರಾನಿಕ್ಸ್ ವರ್ಕ್ಸ್ ಸೇರಿದಂತೆ ವಾಣಿಜ್ಯ ಮಳಿಗೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು, ಮಾಲಿಕರಿಗೆ ದಾಖಲೆಗಳನ್ನು ಪಡೆದು ಪರಿಶೀಲಿಸಿದರು. ದಾಖಲೆ ಪತ್ರಗಳಿಲ್ಲದೆ ಕೋವಿಡ್ ಲಸಿಕೆ ಹಾಕಿಸಿಕೊಳ್ಳದೇ ಇರುವ ಸ್ಥಳೀಯ ಅಂಗಡಿ, ಹೊಟೇಲು, ವ್ಯವಹಾರ ಕೇಂದ್ರಗಳ ಮಾಲೀಕರಿಂದ ಮೊಬೈಲ್ ಸಂಖ್ಯೆಗಳನ್ನು ಪಡೆದು ಲಸಿಕೆ ನೀಡಲು ಮುಂದಾದರು.
ಲಸಿಕೆ ನಿರಾಕರಿಸಿದರೆ ವ್ಯವಹಾರ ಬಂದ್ :
ಲಸಿಕೆ ಅಭಿಯಾನ ಸಂದರ್ಭದಲ್ಲಿ ಆರೋಗ್ಯ ಸಿಬ್ಬಂದಿ ಅವರಿಗೆ ಸಹಕರಿಸದ, ವ್ಯಾಕ್ಸಿನ್ ಪಡೆಯಲು ಹಿಂದೇಟು ಹಾಕಿದ ಕೆಲ ಅಂಗಡಿಕಾರರು ಹಾಗೂ ಕಾರ್ಮಿಕರಿಗೆ ಆರೋಗ್ಯ ಸಿಬ್ಬಂದಿ ಮನವೊಲಿಸಲು ಯತ್ನಿಸಿದರು ನಿರಾಕರಿಸಿದಾಗ’ ಕಡ್ಡಾಯವಾಗಿ ಪ್ರತಿಯೊಬ್ಬರೂ ಲಸಿಕೆ ಪಡೆದುಕೊಳ್ಳಲೇಬೇಕು. ಇಲ್ಲವಾದರೆ ಪೊಲೀಸ್ ಸಿಬ್ಬಂದಿ ಕರೆಯಿಸಿ ಅಂಗಡಿಗಳ ಬಾಗಿಲು ಮುಚ್ಚಿಸಿ ವ್ಯಾಪಾರ ವಹಿವಾಟು ಬಂದ್ ಗೊಳಿಸಲಾಗುತ್ತದೆ ಎಂಬ ಎಚ್ಚರಿಕೆ ನೀಡಿದ ಪ್ರಸಂಗವೂ ಜರುಗಿತು..!!