ಕೊಪ್ಪಳ (ಕುಷ್ಟಗಿ) : ಹಳ್ಳಿಗರನ್ನೇ ಟಾರ್ಗೆಟ್ ಮಾಡಿ ಎಟಿಎಂ ಯಂತ್ರದಿಂದ ಹಣ ಡ್ರಾ ಮಾಡಿ ಕೊಡುವ ನೆಪದಲ್ಲಿ ಹಣ ದೋಚುತಿದ್ದ ಖತರ್ನಾಕ ಕಳ್ಳನನ್ನು ಜಿಲ್ಲೆಯ ಕುಷ್ಟಗಿ ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಕುಷ್ಟಗಿ ಪಟ್ಟಣದ ಮಾರುತಿ ವೃತ್ತದ ಬಳಿ ಇರುವ ಎಸ್.ಬಿ.ಐ. ಬ್ಯಾಂಕ್ ನ ಎಟಿಎಂ ದಲ್ಲಿ 23-11-2021 ರಂದು ಮಧ್ಯಾಹ್ನ ಹಿರೇವಂಕಲಕುಂಟಾ ಗ್ರಾಮದ ವೀರಣ್ಣ ಬಂಗಾರಿ ಎಂಬ ವ್ಯಕ್ತಿಯು ಹಣ ಡ್ರಾ ಮಾಡಲು ತೆರಳಿದಾಗ. ಅಲ್ಲಿಯೇ ಇದ್ದ ಅಪರಿಚಿತ ವ್ಯಕ್ತಿಗೆ 10,000 ರೂ. ಗಳನ್ನು ಡ್ರಾ ಮಾಡಿಕೊಡುವಂತೆ ತನ್ನ ಎಟಿಎಂ ಕಾರ್ಡ ಕೊಟ್ಟಿದ್ದಾನೆ. ನಂತರ ಎಟಿಎಂ ಪಿನ್ ನಂಬರ್ ಒತ್ತುವಾಗ ಅಪರಿಚಿತ ವ್ಯಕ್ತಿ ಮಗ್ಗುಲಲ್ಲಿ ನಿಂತು ಪಿನ್ ಕೋಡ್ ಗಮನಿಸಿ ಹಣ ಡ್ರಾ ಮಾಡಿಕೊಟ್ಟಿದ್ದಾನೆ. ಬಳಿಕ ವೀರಣ್ಣ ಬಂಗಾರಿಗೆ ತನ್ನಲ್ಲಿರುವ ಬೇರೆಯವರ ಎಟಿಎಂ ಕಾರ್ಡ್ ಕೊಟ್ಟು ಹಣ ದೋಚಿ ಮೋಸ ಮಾಡಿದ ಘಟನೆ ನಡೆದಿತ್ತು. ಮೋಸವಾಗಿದೆ ಎಂದು ತಿಳಿದ ಬಳಿಕ ಅಪರಿಚಿತ ವ್ಯಕ್ತಿಯನ್ನು ಹುಡುಕಾಡಿದ್ದು, ಸಿಗಲಾರದಿದ್ದಾಗ ವೀರಣ್ಣ ಬಂಗಾರಿ ಅವರು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಅವರ ಮಾರ್ಗದರ್ಶನದಲ್ಲಿ, ಗಂಗಾವತಿ ಡಿಎಸ್ ಪಿ ಆರ್.ಎಸ್.ಉಪ್ಪನಕೊಪ್ಪ, ಅವರ ನೇತೃತ್ವದಲ್ಲಿ, ಕುಷ್ಟಗಿ ಸಿಪಿಐ ನಿಂಗಪ್ಪ, ಎನ್.ಆರ್, ಪಿಎಸ್ ಐ ತಿಮ್ಮಣ, ಸಿಬ್ಬಂದಿ ಪ್ರಶಾಂತ, ಪರಶುರಾಮ, ಅಮರೇಶ, ಎಂ.ಬಿ, ಇನಾಯತ್ ರವರ ತಂಡ ಕಳ್ಳನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. 03-12-2021 ರಂದು ಪೊಲೀಸ್ ತನಿಖಾ ತಂಡ ಕುಷ್ಟಗಿಯಲ್ಲಿ ಡ್ರೈವರ್ ವೃತ್ತಿಯಲ್ಲಿದ್ದ ಆರೋಪಿ ಕಂದಕೂರ ಗ್ರಾಮದ ಮಂಜುನಾಥ ಕನಕಪ್ಪ ಸಂಗನಾಳ ಉಪ್ಪಾರ ಎಂಬುವ ವ್ಯಕ್ತಿಯನ್ನು ಅದೇ ಎಸ್.ಬಿ., ಎ.ಟಿ.ಎಂ, ಹತ್ತಿರ ಆತನನ್ನು ಬಂಧಿಸಿದ್ದಾರೆ. ನಂತರ ವಿಚಾರಣೆಗೆ ಒಳಪಡಿಸಿದ್ದಾರೆ. ಸುಮಾರು ಒಂದು ವರ್ಷದಿಂದ ಎಟಿಎಂಗೆ ಹಣ ತೆಗೆಯಲು ಬರುವ ಹಳ್ಳಿ ಜನರನ್ನು ಗುರಿ ಮಾಡಿಕೊಂಡು ಎ.ಟಿ.ಎಂ, ಹತ್ತಿರ ಕಾಯುತ್ತಾ, ಹಳ್ಳಿ, ಜನರಿಗೆ ಡ್ರಾ ಮಾಡಿಕೊಡುವ ನೆಪದಲ್ಲಿ ಅವರ ಎ.ಟಿ.ಎಂ ಕಾರ್ಡ ಪಡೆದುಕೊಂಡು ಹಣ ಡ್ರಾ ಮಾಡಿ ಕೊಡುವಾಗ ಅವರ ಪಕ್ಕಾದಲ್ಲಿ ನಿಂತುಕೊಂಡು ಎ.ಟಿ.ಎಂ. ಪಿನ್ ಒತ್ತುವುದನ್ನು ನೋಡಿ ಹಣ ಡ್ರಾ ಮಾಡಿಕೊಟ್ಟು ನಂತರ ಕೈ ಚಳಕದಿಂದ ತನ್ನ ಹತ್ತಿರ ಇದ್ದ ಅಂತದೇ ಬೇರೆಯವರ ಹೆಸರಿನಲ್ಲಿರುವ ಎ.ಟಿ.ಎಂ, ಕಾರ್ಡ ಕೊಟ್ಟು ಮೋಸ ಮಾಡಿ ಕಳಿಸಿದ ನಂತರ ಬೇರೆ ಎ.ಟಿ.ಎಂ.ಗೆ ಹೋಗಿ ಕಾರ್ಡ್ ಹಾಕಿ ಪಿನ್ ಒತ್ತಿ. ಹಣ ಡ್ರಾ ಮಾಡಿ ಅವರ ಖಾತೆಯಿಂದ ಹಣ ಕಳ್ಳತನ ಮಾಡುತ್ತಿರುವುದಾಗಿ ನಿಜ ಒಪ್ಪಿಕೊಂಡಿರುತ್ತಾನೆ. ತನ್ನ ಹತ್ತಿರ ಸಾರ್ವಜನಿಕರ ಎಟಿಎಂ ಕಾರ್ಡನಿಂದ ಕುಷ್ಟಗಿ ಪಟ್ಟಣದಲ್ಲಿ, ಸುಮಾರು 8-10 ಪ್ರಕರಣಗಳಲ್ಲಿ ಕಳ್ಳತನ ಮಾಡಿದ ನಗದು ಹಣ 1,00,000 ರೂ. (ಒಂದು ಲಕ್ಷ ರೂಪಾಯಿಗಳು) ಮತ್ತು ಇತರೆ ಕಡೆ ಜನರಿಗೆ ಮೋಸ ಮಾಡಲು ಉಪಯೋಗಿಸಿದ ಎಟಿಎಂ, ಕಾರ್ಡಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾನೆ. ಸದ್ಯ ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ..!!