‘ಕೃಷಿ ಪ್ರಿಯ’ ಪತ್ರಿಕೆ ಇಂಪ್ಯಾಕ್ಟ್..! ಗಣಿ ಸಚಿವರ ಖಡಕ್ ಆದೇಶ..!!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆ 92 ತಾಂತ್ರಿಕ ಹುದ್ದೆಗಳ ರದ್ದತಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆಯನ್ನು ಸೂಕ್ತವಾಗಿ ಪರಿಶೀಲಿಸುವುದರ ಜೊತೆಗೆ ಯಾವುದೇ ರೀತಿಯ ಕ್ರಮ ಜರುಗಿಸದಂತೆ ಗಣಿ ಖಾತೆ ಸಚಿವ ಹಾಲಪ್ಪ ಆಚಾರ ಅವರು ಕಾರ್ಯದರ್ಶಿಯವರಿಗೆ ಪತ್ರ ಬರೆಯುವ ಮೂಲಕ ಕರ್ನಾಟಕ ಇಂಜಿನಿಯರ್ ಸಂಘ (ಮೈನಿಂಗ್) ಸರಕಾರಕ್ಕೆ ಸಲ್ಲಿಸಿದ ಮನವಿಗೆ ಸ್ಪಂದಿಸಿದ್ದಾರೆ..!

ಗಣಿ ಮತ್ತು ಭೂವಿಜ್ಞಾನ ಇಲಾಖೆ 92 ತಾಂತ್ರಿಕ ಹುದ್ದೆಗಳನ್ನು ರದ್ದತಿಗೆ ದಿನಾಂಕ 24 -07-2020 ರಂದು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸಲ್ಲಿಸಿದ ಮನವಿಗೆ ಸರಕಾರ ಕೂಡಾ ಸ್ಪಂದಿಸುವ ಮೂಲಕ ದಿನಾಂಕ 16-02-2021 ರಂದು ಕೆಲ ಹುದ್ದೆಗಳನ್ನು ರದ್ದತಿ ಜೊತೆಗೆ ಮರುಪದನಾಮೀಕರಣ ಹಾಗೂ ಹುದ್ದೆಗಳ ಸೃಷ್ಟಿಗೆ ಆದೇಶಿಸಿತ್ತು. ಈ ಕುರಿತು ‘ಕೃಷಿ ಪ್ರಿಯ’ ಪತ್ರಿಕೆ ವಿಸ್ತೃತ ವರದಿ ಪ್ರಕಟಿಸಲಾಗಿತ್ತು. ವರದಿ ಗಮನಿಸಿದ ಸಚಿವ ಹಾಲಪ್ಪ ಆಚಾರ ಅವರು ಗಣಿ ಮತ್ತು ಕೈಗಾರಿಕೆ ಇಲಾಖೆ ಕಾರ್ಯದರ್ಶಿ ಅವರಿಗೆ ಪತ್ರ ಬರೆದು, ಇಲಾಖೆ ಸರಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆಯನ್ನು ಪುನರ್ ಪರಿಶೀಲಿಸಲು ಹಾಗೂ ಇಲಾಖೆಯಲ್ಲಿ ಕೈಗೊಳ್ಳಬೇಕಾದ ಆಡಳಿತ ಸುಧಾರಣೆ ಬಗ್ಗೆ ತಿಳಿಸಿದ್ದಾರೆ. ಅಲ್ಲದೆ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮುಖ್ಯವಾದ ಖನಿಜಾನ್ವೇಷನೆ ವಿಭಾಗವನ್ನು ಬಲಪಡಿಸುವುದು. ಅನಧಿಕೃತ ಗಣಿಗಾರಿಕೆ/ಸಾಗಾಣಿಕೆ ಮೇಲೆ ಕ್ರಮಕ್ಕೆ ಮುಂದಾಗಿ ರಾಜಸ್ವ ಸೋರಿಕೆ ನಿಯಂತ್ರಣ ಸೇರಿದಂತೆ ಇಲಾಖೆ ಸಮಗ್ರ ಆಡಳಿತ ಸುಧಾರಣೆ ಕೈಗೊಳ್ಳಲು ವಿಸ್ತೃತ ವರದಿ ಸಲ್ಲಿಸಲು ತಿಳಿಸಿದ್ದಾರೆ. ವಿಸ್ತೃತ ವರದಿ ಸಲ್ಲಿಸುವರೆಗೂ ಪ್ರಸ್ತುತ ಪತ್ರಾಂಕಿತ ವ್ಯವಸ್ಥಾಪಕರ ಹುದ್ದೆಗಳನ್ನು ಸೃಜಿಸುವ ಪ್ರಸ್ತಾವನೆ ಮೇಲೆ ಯಾವುದೇ ಕ್ರಮ ವಹಿಸದಿರುವಂತೆ ಸಚಿವರು ಪತ್ರದಲ್ಲಿ ಸೂಚನೆ ನೀಡಿದ್ದಾರೆ..!!