ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ (ಕುಷ್ಟಗಿ) : ಪಿಡಿಒಗಳು ಗ್ರಾಮ ಪಂಚಾಯಿತಿಗಳಿಗೆ ದಂಡಾಧಿಕಾರಿ ಇದ್ದಂತೆ, ಜವಾಬ್ದಾರಿ ಅರಿತು ಕೆಲಸ ನಿರ್ವಹಿಸಬೇಕು ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಅವರು ಎಚ್ಚರಿಕೆ ನೀಡಿದರು..!
ಜಿಲ್ಲೆಯ ಕುಷ್ಟಗಿ ಪಟ್ಟಣದ ಸರ್ಕ್ಯೂಟ್ ಹೌಸ್ ನಲ್ಲಿ 28-12-2021 ರಂದು ನಡೆದ ತಾಲೂಕು ಪಂಚಾಯಿತಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಜಲ ಜೀವನ ಮಷೀನ್ ಕಾಮಗಾರಿ ಅನುಷ್ಠಾನ ಕುರಿತು ಚರ್ಚೆ ಸಂದರ್ಭದಲ್ಲಿ ಅವರು ಮಾತನಾಡಿ, ನೀವು ಮತ್ತು ನಾನು ಜನ ಸೇವಕರಾಗಿ ಕೆಲಸ ಮಾಡಬೇಕು. ನಾನು ಜನರ ಮತಗಳ ಋಣದಲ್ಲಿದ್ದರೇ, ನೀವು ಪಗಾರ(ಸಂಬಳ)ದ ಋಣದಲ್ಲಿದ್ದೀರಿ. ನಿಷ್ಠೆಯಿಂದ ಕೆಲಸ ಮಾಡಿದರೆ ನಮ್ಮ ಸೇವೆ ಸಾರ್ಥಕವಾಗಿ ಜನ ಮೆಚ್ಚಿ ನೆನೆಯುತ್ತಾರೆ ಎಂದರು.
ನಾನು ಈವರೆಗೆ ತಾಲೂಕಿನ 50ಕ್ಕೂ ಹೆಚ್ಚು ಗ್ರಾಮಗಳಿಗೆ ಭೇಟಿ ನೀಡಿದ್ದು, ಒಬ್ಬ ಪಿಡಿಒ ಕಾಣಲಿಲ್ಲ. ತಾಲೂಕಿನ ಮೂರು ಗ್ರಾಪಂ ಹೊರತು ಪಡಿಸಿದರೆ ಉಳಿದ ಪಂಚಾಯಿತಿಗಳಲ್ಲಿ ನಾಲ್ಕೈದು ಹಳ್ಳಿಗಳಿವೆ. ಅಲ್ಲಿನ ಸಮಸ್ಯೆಗಳ ಬಗ್ಗೆ ಪಿಡಿಒಗಳಿಗೆ ಮಾಹಿತಿಯೇ ಇರುವುದಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಪಂ ಇಂಜನೀಯರಿಂಗ್ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜನೀಯರ್ ಶಾಮಣ್ಣ ನಾರಿನಾಳ ಮಾತನಾಡಿ, ಜಲಜೀವನ್ ಮಷೀನ್ ಯೋಜನೆಯ ಕಾಮಗಾರಿಗೆ ಗ್ರಾಪಂ ಪಿಡಿಒಗಳಿಂದ ಸಹಕಾರ ಸಿಗುತ್ತಿಲ್ಲ. ಕಾಮಗಾರಿ ಬಗ್ಗೆ ಇಲ್ಲಸಲ್ಲದ ದೂರು ನೀಡುತ್ತಾರೆ ಎಂದು ಸಭೆಗೆ ದೂರಿದರು.
ಆಗ ಶಾಸಕ ಬಯ್ಯಾಪೂರ ಪ್ರತಿಕ್ರಿಯಿಸಿ, ಪಿಡಿಒಗಳು ಜವಾಬ್ದಾರಿಯುತ ಕಾರ್ಯಗಳು ನಿರೀಕ್ಷಿಸುವುದೇ ಅರ್ಥವಿಲ್ಲ. ಜಲ ಜೀವನ್ ಮಷೀನ್ ಕಾಮಗಾರಿ ಅನುಷ್ಠಾನ ಜವಾಬ್ದಾರಿ ತಾಪಂ ಇಒ ಹೊರಬೇಕು. ಇನ್ಮುಂದೆ ಯಾವುದೇ ಕೆಲಸಗಳಿರಲಿ ಇವರನ್ನೇ ಕೇಳುವಂತೆ ಜಿಪಂ ಎಇಇಗೆ ಸೂಚಿಸಿದರು.
ಕಾಯ್ದಿಟ್ಟ ಅರಣ್ಯ ಪ್ರದೇಶ ಮೂಲಕ ಕಪಿಲತೀರ್ಥ ಜಲಪಾತ ಪ್ರವಾಸಿ ತಾಣಕ್ಕೆ ತೆರಳಲು ರಸ್ತೆ ನಿರ್ಮಾಣಕ್ಕೆ ಗಿಡಗಳು ಹಾಳಾಗುತ್ತವೆ ಎಂದು ಪರ್ಯಾಯ ಗಿಡಗಳನ್ನು ನೆಡಲು 23 ಲಕ್ಷ ರೂ. ಪಾವತಿಸಲಾಗಿದೆ. ಆದಾಗ್ಯೂ ಅರಣ್ಯ ಇಲಾಖೆಯವರು ಅನುಮತಿ ನೀಡಲು ಕಳೆದ 2 ವರ್ಷದಿಂದ ಅನಗತ್ಯ ವಿಳಂಬ ಮಾಡುತ್ತಿದ್ದು, ಇದಕ್ಕೆ ಸ್ಪಷ್ಟ ಕಾರಣ ನೀಡುವಂತೆ ಶಾಸಕ ಬಯ್ಯಾಪೂರ ಅವರು ವಲಯ ಅರಣ್ಯಾಧಿಕಾರಿ ವಿರುದ್ಧ ಹರಿಹಾಯ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯಾಧಿಕಾರಿ ಅನ್ವರ್ ಸಾಬ, ಮೇಲಾಧಿಕಾರಿಗಳಿಗೆ ಸಾಕಷ್ಟು ಪತ್ರ ಬರೆದಿದ್ದರೂ ಯಾವುದೇ ಉತ್ತರ ಬಂದಿಲ್ಲ. ಹೀಗಾಗಿ ಶಾಸಕರೇ ಆದೇಶ ನೀಡಿದರೇ ಶೀಘ್ರದಲ್ಲಿ ಪರವಾನಗಿ ನೀಡಲು ಅನುಕೂಲವಾಗಲಿದೆ ಎಂದು ಹೇಳಿದರು.
ಕಂಪ್ಯೂಟರ್ ಕಳ್ಳತನ ತಡೆಗೆ ಡಿವೈಸ್ : ತಾಲೂಕಿನ ಶಾಲೆಗಳಲ್ಲಿ ಪದೇ ಪದೇ ಕಂಪ್ಯೂಟರ್ ಕಳವು ಹಾವಳಿ ತಡೆಗೆ ಈಗಾಗಲೇ ಬೆಂಗಳೂರು ನಗರ ಪ್ರದೇಶಗಳಲ್ಲಿ ಚಾಲ್ತಿ ಇರುವ ಡಿವೈಸ್ ಬಳಸಿಕೊಳ್ಳುವ ಕುರಿತು, ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಪ್ರಸ್ತಾಪಿಸಿ ಈ ಹೊಸ ಡಿವೈಸ್ ಅಳವಡಿಸಿದರೆ, ಕಳ್ಳರು ಕಳ್ಳತನಕ್ಕೆ ಯತ್ನಿಸಿದರೆ ಪೊಲೀಸ್ ಠಾಣೆ, ಪಿಎಸೈ, ಶಾಲೆಯ ಮುಖ್ಯ ಶಿಕ್ಷಕರ ಮೋಬೈಲ್ ಗೆ ಸೈರನ್ ರಿಂಗ್ ಆಗುತ್ತಿದೆ. ಇದರಿಂದ ಕಳ್ಳತನ ತಪ್ಪಿಸಬಹುದಾಗಿದೆ ಎಂದು ಸಭೆಗೆ ಸೂಚನೆ ನೀಡಿದರು.
ಬಿಇಒ ಚನ್ನಬಸಪ್ಪ ಮಗ್ಗದ್ ಅವರು, ಪ್ರೌಢಶಾಲಾ ನಿಧಿಯಲ್ಲಿ5 ಸಾವಿರ ರೂ.ಮೊತ್ತ ಇಲ್ಲ ಎಂದಾಗ, ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅವರು, ಮದ್ಯೆಪ್ರವೇಶಿಸಿ ಶಿಕ್ಷಕರಲ್ಲಿ ಇಚ್ಛಾಶಕ್ತಿ ಕೊರತೆ ಇದ್ದು, ಮನಸ್ಸು ಮಾಡಿದರೆ ಸಾಧ್ಯವಿದ್ದು ನಾನು ಈಗಲೇ ಮನಸ್ಸು ಮಾಡಿದರೆ ಪ್ರಾಥಮಿಕ ಶಾಲೆಗಳಿಗೂ ಈ ಡಿವೈಸ್ ಅಳವಡಿಸಬಹುದಾಗಿದೆ. ಕೂಡಲೇ ಅಲ್ಲಿದ್ದ ಗ್ರಾ.ಪಂ. ಪಿಡಿಓಗಳಿಗೆ ತಮ್ಮ ಗ್ರಾ.ಪಂ.ವ್ಯಾಪ್ತಿಯಿಂದಲೇ ಪ್ರೌಢಶಾಲೆಗಳ ಈ ಡಿವೈಸ್ ಖರೀದಿಸಲು ಸೂಚಿಸಿದರು.
ಟಿಎಪಿಸಿಎಂಎಸ್ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ್, ತಹಸೀಲ್ದಾರ್ ಎಂ.ಸಿದ್ದೇಶ್, ತಾಪಂ ಇಒ ಜಯರಾಂ ಚವ್ಹಾಣ್ ಸೇರಿದಂತೆ ವಿವಿಧ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಪಿಡಿಓ ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು ಹಾಜರಿದ್ದರು..!!
ಸುದ್ದಿ ಕೃಪೆ : ಮುನಿ, ಕುಷ್ಟಗಿ.