ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ (ಕುಷ್ಟಗಿ) : ಕೊರೋನಾ ಸಾಂಕ್ರಾಮಿಕ ಭೀತಿ ಹಾಗೂ ಅಕಾಲಿಕ-ಸಕಾಲಿಕ ಮಳೆ ಮಧ್ಯೆಯೂ ಹೊಸ ವರ್ಷದ ಮೊದಲ ಹಬ್ಬವಾದ ಎಳ್ಳ ಅಮಾವಾಸ್ಯೆಯನ್ನು ರೈತಾಪಿ ಕುಟುಂಬ ಭಾನುವಾರ ಸಂಭ್ರಮ, ಸಡಗರದಿಂದ ಆಚರಿಸಿದರು..!
ಜಿಲ್ಲೆಯ ಕುಷ್ಟಗಿ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಎಳ್ಳ ಅಮಾವಾಸ್ಯೆ ನಿಮಿತ್ತ ರೈತ ಕುಟುಂಬಗಳು ತಮ್ಮ ಜಮೀನುಗಳಲ್ಲಿ ಪಾಂಡವರನ್ನು ಪ್ರತಿಷ್ಠಾಪಿಸಿ, ಭಕ್ತಿಭಾವದಿಂದ ಪೂಜೆ ಸಲ್ಲಿಸಿದರು. ಬಳಿಕ ಜಮೀನು ತುಂಬೆಲ್ಲಾ ಸುತ್ತಾಡಿ ಚೆರಗ ಚೆಲ್ಲಿ ಭಕ್ತಿ ಸಮರ್ಪಿಸುವ ಮೂಲಕ ಭೂತಾಯಿ ಕೃಪೆಗೆ ಪಾತ್ರರಾದರು. ಕಳೆದ ನಾಲ್ಕೈದು ವರ್ಷಗಳಿಂದ ಅತಿವೃಷ್ಟಿ-ಅನಾವೃಷ್ಟಿಯಿಂದ ಬೆಳೆ ಕೈಸೇರಲಿಲ್ಲ. ಈ ವರ್ಷದ ಹಿಂಗಾರಿನಲ್ಲಿ ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದ ರೈತರಿಗೆ ಕಳೆದೆರಡು ತಿಂಗಳಲ್ಲಿ ಸುರಿದ ಅಕಾಲಿಕ ಮಳೆ ಆತಂಕ ತಂದೊಡ್ಡಿತು. ವಿವಿಧ ಬೆಳೆಗಳನ್ನು ಉಳಿಸಿಕೊಳ್ಳಲು ರೈತರಿಗೆ ಪ್ರಯಾಸಪಡುವಂತಾಗಿದೆ. ಎಳ್ಳ ಅಮವಾಸ್ಯೆ ಅಂಗವಾಗಿ ರೈತರು ಭೂತಾಯಿಗೆ ನೈವೇದ್ಯ ಸಮರ್ಪಿಸುವ ಮೂಲಕ ಹಿಂಗಾರು ಬೆಳೆಯನ್ನಾದರೂ ದಕ್ಕಿಸಿಕೊಡುವಂತೆ ಪ್ರಾರ್ಥನೆ ಸಲ್ಲಿಸುತ್ತಿರುವುದು ಕಂಡುಬಂತು.
ಸಡಗರ ಸಂಭ್ರಮ : ಜಿಲ್ಲೆಯ ರೈತರು ಎಳ್ಳ ಅಮವಾಸ್ಯೆ ಅಂಗವಾಗಿ ರೈತರು ತಮ್ಮ ಹೊಲಗಳಿಗೆ ತೆರಳಿ ಬೆಳಗ್ಗೆಯಿಂದಲೇ ಸಿದ್ಧತೆ ನಡೆಸಿದ್ದರು. ಎತ್ತಿನ ಬಂಡಿ, ಎತ್ತುಗಳು ಹಾಗೂ ಟ್ರ್ಯಾಕ್ಟರ್‌ಗಳನ್ನು ಸ್ವಚ್ಛಗೊಳಿಸಿ, ಬಣ್ಣ ಬಣ್ಣದ ರಿಬ್ಬನ್, ಬಲೂನ್‌ಗಳನ್ನು ಕಟ್ಟಿ ಸಿಂಗರಿಸಿಕೊಂಡು ಹೊಲ-ಗದ್ದೆಗಳತ್ತ ಪ್ರಯಾಣ ಬೆಳಿಸಿದ್ದು ನೋಡುಗರಿಗೆ ಮುದ ನೀಡುವಂತಿತ್ತು..!!