ಗೂಡಂಗಡಿ ತೆರವು : ಬೀದಿಬದಿ ವ್ಯಾಪಾರಿಗಳು ಅತಂತ್ರ

 

 

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ (ಕುಷ್ಟಗಿ) : ಪುಟ್ಪಾತ್ ವ್ಯಾಪಾರಿಗಳ ಅಂಗಡಿ ಮುಗ್ಗಟ್ಟುಗಳನ್ನು ಏಕಾಏಕಿ ತೆರವಿಗೆ ಮುಂದಾದ ಪುರಸಭೆ ಅಧಿಕಾರಿಗಳ ನಡೆ ವಿರುದ್ಧ ಅಂಗಡಿಕಾರರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಜರುಗಿತು..!

ಪೊಲೀಸರ ಸಮಕ್ಷಮದಲ್ಲಿ ಪುರಸಭೆ ಮುಖ್ಯಾಧಿಕಾರಿ ಮಹೇಶ ಹಿರೇಮಠ ಹಾಗೂ ಸಿಬ್ಬಂದಿ ವರ್ಗ ಜೆಸಿಬಿ ವಾಹನದೊಂದಿಗೆ ಬೆಳಿಗ್ಗೆ ಬಸವೇಶ್ವರ ವೃತ್ತದಿಂದ ಪುರಸಭೆವರೆಗೆ ಹಾಗೂ ಬಸವೇಶ್ವರ ವೃತ್ತದಿಂದ ಮಾರುತಿ ವೃತ್ತ, ಕೆಇಬಿ ಹಾಗೂ ಕೊಪ್ಪಳ ರಸ್ತೆ ಮಲ್ಲಯ್ಯ ವೃತ್ತದ ವರೆಗಿನ ಮುಖ್ಯ ರಸ್ತೆಯ ಎರಡೂ ಬದಿಯಲ್ಲಿ ಫುಟ್ಪಾತ್ ಅತಿಕ್ರಮಣ ಮಾಡಿರುವ ಗೂಡಂಗಡಿಗಳ ತೆರವು ಕಾರ್ಯಾಚರಣೆಗೆ ಮುಂದಾದರು.
ಗೂಡಂಗಡಿಗಳ ತೆರವಿಗೆ ಆತಂಕಕ್ಕೊಳಗಾದ ಬೀದಿ ಬದಿ ವ್ಯಾಪಾರಸ್ಥರು, ಮುನ್ಸೂಚನೆ ಇಲ್ಲದೇ ಯಾವುದೇ ನೋಟಿಸ್ ಜಾರಿ ಮಾಡದೆ ಏಕಾಏಕಿ ತೆರವಿಗೆ ಮುಂದಾಗಿರುವುದು ಎಷ್ಟು ಸರಿ ಎಂದು ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಇದರಿಂದ ವಿಚಲಿತಗೊಂಡ ಮುಖ್ಯಾಧಿಕಾರಿ ಫುಟ್ಪಾತ್ ಮೇಲೆ ಡಬ್ಬಾ ಅಂಗಡಿ ಇರಿಸಿ ವ್ಯಾಪಾರ ಮಾಡಲು ಅವಕಾಶವಿಲ್ಲ. ಹಾಗಾಗಿ ತೆರವುಗೊಳಿಸಲೇಬೇಕು. ಬೇಕಾದರೆ ಸಂತೆ ಮಾರುಕಟ್ಟೆ ಪ್ರಾಂಗಣದಲ್ಲಿ ಅವಕಾಶ ನೀಡುತ್ತೇವೆ ಇಲ್ಲಿಂದ ಜಾಗೆ ಖಾಲಿ ಮಾಡಬೇಕು ಎಂದು ಸೂಚಿಸಿದರು. ಇದಕ್ಕೆ ಒಪ್ಪದ ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರಾಘವೇಂದ್ರ ಭಜಂತ್ರಿ, ಬೀದಿ ಬದಿಯಲ್ಲಿ ವ್ಯಾಪಾರ ವಹಿವಾಟು ನಡೆಸಲು ಸರ್ಕಾರದ ಆದೇಶವಿದೆ. ಆದೇಶದ ನಿಯಮದಂತೆ ತಳ್ಳೋಬಂಡಿಯಲ್ಲಿ ವ್ಯಾಪಾರ ನಡೆಸುತ್ತಿದ್ದೇವೆ. ಈ ಸ್ಥಳಬಿಟ್ಟು ಕದಲುವುದಿಲ್ಲ. ಈ ಕುರಿತು ಮೊದಲೇ ವ್ಯಾಪಾರಸ್ಥರ ಸಭೆ ಕರೆದು ಚರ್ಚಿಸದೇ ತೆರವಿಗೆ ಮುಂದಾಗಿರುವುದು ಎಷ್ಟು ಸರಿ. ಬೀದಿ ಬಿಟ್ಟು ಎಲ್ಲಿಗೆ ಹೋಗಬೇಕು. ಒಂದೆಡೆ ಪುರಸಭೆಯಿಂದ ಬೀದಿಬದಿ ವ್ಯಾಪಾರಸ್ಥರಿಗೆ ಪ್ರಮಾಣ ಪತ್ರ ನೀಡುತ್ತೀರಿ, ಮತ್ತೊಂದೆಡೆ ತೆರವಿಗೆ ಮುಂದಾಗುತ್ತೀರಿ ಏಕೆ.? ತೆರವುಗೊಳಿಸಲು ನಿಮ್ಮ ಬಳಿ ಆದೇಶವಿದ್ದರೆ ಕೊಡಿ ಎಂದು ಪ್ರಶ್ನಿಸಿದರು. ಕೇವಲ ನಮ್ಮನ್ನೇ ಗುರಿ ಮಾಡದೇ ರಸ್ತೆ ಅತಿಕ್ರಮಣ ಮಾಡಿರುವ ಖಾಸಗಿ ವಾಣಿಜ್ಯ ಮಳಿಗೆಗಳನ್ನು, ಕೋರ್ಟ್ ಮುಂಭಾಗದಲ್ಲಿರುವ ವಕೀಲರ ಮಳಿಗೆಗಳನ್ನು ಮೊದಲು ತೆರವುಗೊಳಿಸಿ ನಂತರ ಇಲ್ಲಿ ಕಾರ್ಯಾಚರಣೆ ಮುಂದುವರೆಸಿ ಎಂದು ವ್ಯಾಪಾರಸ್ಥರು ಪಟ್ಟು ಹಿಡಿದು ಗಲಾಟೆ ಆರಂಭಿಸಿದರು. ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ಶಾಂತಗೊಳಿಸಿದರು.

ಕೃಷಿ ಪ್ರಿಯ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಾಧಿಕಾರಿ, ಪಟ್ಟಣದೊಳಗೆ ಹಾದು ಹೋಗಿರುವ ಎಲ್ಲಾ ಮುಖ್ಯ ರಸ್ತೆಗಳ ವಿಸ್ತೀರ್ಣ 80 ಅಡಿಯಿದ್ದು, ಈ ರಸ್ತೆಗಳಲ್ಲಿ ಯಾವುದೇ ಅಂಗಡಿ ಮುಗ್ಗಟ್ಟುಗಳಿರಲಿ ಅವುಗಳನ್ನು ಕಡ್ಡಾಯವಾಗಿ ತೆರವುಗೊಳಿಸಲಾಗುವುದು ಎಂದು ತಿಳಿಸಿದ್ದಾರೆ..!!