ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ (ಕುಷ್ಟಗಿ) : ಬೆಂಗಳೂರು ನಗರಕ್ಕೆ ಕುಡಿಯಲು ನೀರು ಕೇಳಿದರೆ ಕೊಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿರುವ ತಮಿಳುನಾಡು ಸರ್ಕಾರ ಒಂದೆಡೆ ಚೆನ್ನೈ ನಗರಕ್ಕೆ ಆಲಮಟ್ಟಿ ಜಲಾಶಯದಿಂದ ಕುಡಿಯಲು ನೀರು ಪಡೆಯುತ್ತಿರುವ ದ್ವಂದ್ವ ನೀತಿಯನ್ನು ಇಲ್ಲಿಯ ಕಾಂಗ್ರೆಸ್ ನಾಯಕರು ಮೊದಲು ಅರಿಯಬೇಕು ಎಂದು ಕೃಷ್ಣ ಬಿ ಸ್ಕೀಂ ಹೋರಾಟ ಸಮಿತಿ ಸಂಚಾಲಕ ಗಂಗಾಧರ ಕುಷ್ಟಗಿ ಹೇಳಿದರು.
ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ 09-01-2022 ರಂದು ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಚೆನ್ನೈ ನಗರಕ್ಕೆ ಆಲಮಟ್ಟಿ ಜಲಾಶಯದಿಂದ ಕುಡಿಯಲು ನೀರು ಕೊಡಿ ಎಂದು ಬೇಡಿ ಪಡೆದುಕೊಳ್ಳಲಾಗುತ್ತಿದೆ. ಇತ್ತ ಬೆಂಗಳೂರು ನಗರಕ್ಕೆ ಕುಡಿಯಲು ನೀರು ಬಿಡುವುದಿಲ್ಲ ಎಂಬ ದುರ್ವರ್ತನೆ, ದುಷ್ಟತನ ಹಾಗೂ ಅಮಾನವೀಯತೆಯನ್ನು ತಮಿಳುನಾಡು ಸರಕಾರ ಮಾಡುತ್ತಿದೆ. ರಾಜ್ಯದಲ್ಲಿ ಕಾವೇರಿ ನಡಿಗೆ, ಮೇಕೆ ದಾಟು ನಡಿಗೆ ಎಂದು ಆರಂಭಿಸಿರುವ ಕಾಂಗ್ರೆಸ್ ನಾಯಕರ ಹೋರಾಟದಿಂದ ಏನು ಸಾಧನೆಯಾಗದು. ಮೊದಲು ಮೇಕೆ ದಾಟು ಪಾದಯಾತ್ರೆ ಆರಂಭಿಸಿರುವುದನ್ನು ಬಿಟ್ಟು ಆಲಮಟ್ಟಿ ಜಲಾಶಯ ಬಳಿ ಧರಣಿ ಆರಂಭಿಸಲಿ. ತಮಿಳುನಾಡಿನ ಚೆನ್ನೈ ಗೆ ಕುಡಿಯಲು ನೀರು ಬಿಡುತ್ತಿರುವುದನ್ನು ಮೊದಲು ನಿಲ್ಲಿಸಲಿ. ಆಗ ತಮಿಳುನಾಡು ಮುಖ್ಯಮಂತ್ರಿ ಆದಿಯಾಗಿ ಚೆನ್ನೈ ನ ಜನ ಕುಡಿಯುವ ನೀರಿಗಾಗಿ ಬಿಕ್ಕಬೇಕಾಗುವ ಪ್ರಸಂಗ ಎದುರಾಗುತ್ತದೆ. ಅಲ್ಲಿನ ಎಲ್ಲಾ ಕೈಗಾರಿಕೆಗಳು ಬಂದ್ ಆಗಿ ಉಸಿರುಗಟ್ಟುವಂತಾಗುತ್ತದೆ. ಈ ಕುರಿತು ಬೆಂಗಳೂರಿನವರಿಗೆ ತಿಳಿದಿಲ್ಲ, ಕನ್ನಡ ಪರ ಸಂಘಟನೆಗಳು ಅರ್ಥ ಮಾಡಿಕೊಳ್ಳಬೇಕು. ನಮ್ಮ ನಾಡಿನಿಂದ ತಮಿಳುನಾಡಿಗೆ ನೀರು ಹರಿಯುತ್ತಿದೆ ಎಂದು ತಿಳಿಯಬೇಕು. ನೀರು ಹರಿಯುವುದನ್ನು ಬಂದ್ ಮಾಡಲು ಆಲಮಟ್ಟಿ ಜಲಾಶಯಕ್ಕೆ ಬಂದು ಧರಣಿ ಆರಂಭಿಸಬೇಕು. ಇಲ್ಲಿನ ಕಾಂಗ್ರೆಸ್ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ರಾಜ್ಯದ ತಮ್ಮ ನಾಯಕರ ಗಮನಕ್ಕೆ ತರಬೇಕು. ಈ ವಿಷಯ ಬಿಟ್ಟು ತಾಲೂಕಿನ ಶಾಲೆಗಳಿಗೆ ಭೇಟಿ ನೀಡಲು ಇವರೇನು ಕ್ಷೇತ್ರ ಶಿಕ್ಷಣಾಧಿಕಾರಿಗಳೆ, ಡಿಡಿಪಿಐ, ಅಥವಾ ತನಿಖಾಧಿಕಾರಿಗಳೆ ಎಂದು ಪ್ರಶ್ನಿಸಿದರು.
ಕೃಷ್ಣೆಯಿಂದ 15 ಟಿಎಂಸಿ ನೀರು ಚೆನ್ನೈಗೆ ಆಂದ್ರದ ಮೂಲಕ ಸುಮಾರು 450 ಕಿ.ಮೀ ನಷ್ಟು ಹರಿದು ವ್ಯರ್ಥವಾಗಿ ಅರಬ್ಬಿ ಸಮುದ್ರ ಸೇರುತ್ತಿದೆ. ಕೃಷ್ಣಾ ಬಿ ಸ್ಕೀಂನ ಕೊಪ್ಪಳ ಏತ ನೀರಾವರಿ ಹರಿ ಬ್ರಹ್ಮ ಬಂದರು ಸಾಧ್ಯವಾಗುವುದಿಲ್ಲ ಎಂದು ಹೇಳಿಕೆ ನೀಡುವ ಶಾಸಕ ಬಯ್ಯಾಪೂರ, ತಮ್ಮ ಕಾಂಗ್ರೆಸ್ ನಾಯಕರನ್ನು ಕರೆಯಿಸಿ ಮೇಕೆದಾಟು ಮಾದರಿಯಲ್ಲಿ ಆಲಮಟ್ಟಿ ಜಲಾಶಯ ಕ್ರಸ್ಟ್ ಗೇಟ್ ಎತ್ತರಿಸುವ ಕುರಿತು ಪಾದಯಾತ್ರೆ ಮಾಡಿಸಬೇಕಿತ್ತು. ಅದನ್ನೆಲ್ಲ ಬಿಟ್ಟು ತಲಾಟಿ, ತಹಸೀಲ್ದಾರ್ ಕೆಲಸ ಮಾಡುತಿದ್ದಾರೆ ಎಂದು ಆರೋಪಿಸಿದರು. ಮೇಕೆದಾಟು ಪಾದಯಾತ್ರೆ ಆರಂಭಿಸಿರುವ ಡಿಕೆಶಿ ತಮ್ಮ ರಾಜಕೀಯ ನೆಲೆಗಟ್ಟಿಗಾಗಿ ಪಾದಯಾತ್ರೆ ಆರಂಭಿಸಿದ್ದಾರೆ ಎಂದು ಆರೋಪಿಸಿದರು..!!