ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ (ಕುಷ್ಟಗಿ) : ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕುಷ್ಟಗಿ ಶಾಖೆ ವತಿಯಿಂದ ಕೋವಿಡ್‌ನಿಂದ ನೊಂದ ಕುಟುಂಬಗಳಿಗೆ ಉಚಿತ ಹೊಲಿಗೆ ಯಂತ್ರಗಳು ಹಾಗೂ ದಿನಸಿ ಕಿಟ್‌ಗಳನ್ನು ವಿತರಿಸಲಾಯಿತು..!
ಜಿಲ್ಲೆಯ ಕುಷ್ಟಗಿ ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸ್ಥಳೀಯವಾಗಿ ಕೋವಿಡ್‌ನಿಂದ ನೊಂದ ಐದು ಬಡ ಕುಟುಂಬಗಳಿಗೆ ಹೊಲಿಗೆ ಯಂತ್ರ ಹಾಗೂ ಹತ್ತು ಕುಟುಂಬಗಳಿಗೆ ಆಹಾರ ದಿನಸಿ ಕಿಟ್ ವಿತರಿಸಲಾಯಿತು.
ರೆಡ್‌ಕ್ರಾಸ್ ಸಂಸ್ಥೆಯ ಕುಷ್ಟಗಿ ಶಾಖೆಯ ಅಧ್ಯಕ್ಷ ಡಾ.ವಿಜಯಕುಮಾರ್ ಬಿರಾದಾರ ಮಾತನಾಡಿ, ಕೋವಿಡ್ ಸಾಂಕ್ರಾಮಿಕ ರೋಗವು ಉಳ್ಳವರಿಗೂ ಹಾಗೂ ಉಳ್ಳದಿಲ್ಲದವರಿಗೂ ಜೀವನ ಪಾಠ ಕಲಿಸಿದೆ. ಕೋವಿಡ್ ದಿಂದ ಎಲ್ಲರೂ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಬಹಳಷ್ಟು ಜನರು ಉತ್ತಮವಾಗಿ ಕೆಲಸನಿರ್ವಹಿಸಿ, ಸಂಕಷ್ಟದಲ್ಲಿರುವ ಜನರಿಗೆ ನೆರವಾಗಿದ್ದಾರೆ. ಅದೇ ರೀತಿಯಲ್ಲಿ ರೆಡ್‌ಕ್ರಾಸ್ ಸಂಸ್ಥೆಯು ರಕ್ತದಾನ ಶಿಬಿರ , ಆಹಾರ ಕಿಟ್‌ಗಳ ವಿತರಣೆ ಮಾಡಿದೆ. ರೆಡ್‌ಕ್ರಾಸ್ ಸಂಸ್ಥೆ ಕೊಪ್ಪಳ ಜಿಲ್ಲಾ ಶಾಖೆಯು ಕೋವಿಡ್ -19 ರ ಸಂದರ್ಭದಲ್ಲಿ ಸಲ್ಲಿಸಿದ ಸೇವಾ ಮನೋಭಾವವನ್ನು ಪರಿಗಣಿಸಿ ಈಚೆಗೆ ರಾಜ್ಯಪಾಲರು ಪ್ರಶಸ್ತಿಯನ್ನು ನೀಡಿದ್ದಾರೆ ಎಂದು ಹೇಳಿದರು.
ಪ್ರಧಾನ ಕಾರ್ಯದರ್ಶಿ ಡಾ.ರವಿಕುಮಾರ್ ದಾನಿ ಮಾತನಾಡಿ, ಕೋವಿಡ್ ಸೋಂಕಿನಿಂದ ರಕ್ಷಣೆ ಹಾಗೂ ಮೂರನೇ ಅಲೆ ಹಾಗೂ ಒಮಿಕ್ರಾನ್ ತಡೆಗಟ್ಟುವ ನಿಟ್ಟಿನಲ್ಲಿ ಕೋವಿಡ್ ಲಸಿಕೆಯನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ಸಲಹೆ ನೀಡಿದರು.
ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಕೆ.ಎಸ್.ರೆಡ್ಡಿ ಮಾತನಾಡಿದರು. ರೆಡ್ ಕ್ರಾಸ್ ಸಂಸ್ಥೆಯ ತಾಲೂಕು ಘಟಕದ ನಿರ್ದೇಶಕರಾದ ಬಾಲಜಿ ಬಳಿಗಾರ, ಮಹಾಂತಯ್ಯ ಅರಳೆಲೆಮಠ, ಅಪ್ಪಣ್ಣ ನವಲೆ, ಮಲ್ಲಿಕಾರ್ಜುನ ಬಳಿಗಾರ, ಆರ್. ಟಿ. ಸುಭಾನಿ, ಡಾ.ಮಂಜುನಾಥ್ ಗೊಂಡಬಾಳ ಇತರರಿದ್ದರು..!!
ಸುದ್ದಿ ಕೃಪೆ : ಮುನಿ, ಕುಷ್ಟಗಿ.