ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಗಡಿ ಭಾಗವಾದ ನಿಲೋಗಲ್ ಗ್ರಾಮದಲ್ಲಿ ಪದವಿ ಪೂರ್ವ ಕಾಲೇಜಿಗಾಗಿ ಹೋರಾಟ ಆರಂಭವಾಗಿದೆ..!
16-01-2022 ರಂದು ಬೆಳಗ್ಗೆ ನಿಲೋಗಲ್ ಗ್ರಾಮದಲ್ಲಿ ಸಭೆ ಸೇರಿದ ಗ್ರಾಮಸ್ಥರು ಪದವಿ ಪೂರ್ವ ಕಾಲೇಜು ಸ್ಥಾಪನೆಗೆ ಒಕ್ಕೊರಲಿನಿಂದ ದ್ವನಿಗೂಡಿಸುವ ಮೂಲಕ ಬೆಂಬಲ ವ್ಯಕ್ತಪಡಿಸಿದರು. 1984 ರಲ್ಲಿಯೇ ನಿಲೋಗಲ್ ಗ್ರಾಮದಲ್ಲಿ ಸರಕಾರಿ ಪ್ರೌಢ ಶಾಲೆ ಸ್ಥಾಪನೆಯಾಗಿದೆ. ಶಾಲೆಯಲ್ಲಿ 452 ವಿದ್ಯಾರ್ಥಿಗಳು ಈಗಾಗಲೇ ಅಭ್ಯಾಸಮಾಡುತ್ತಿದ್ದು, ಮುಂದಿನ ವಿದ್ಯಾಭ್ಯಾಸಕ್ಕಾಗಿ ದೂರದ ಬಾಗಲಕೋಟೆ ಜಿಲ್ಲೆಯ ಬಾದಾಮಿ, ಗದಗ, ರೋಣ, ಇಲಕಲ್, ಬೇಲೂರು ಹಾಗೂ ಗಜೇಂದ್ರಗಡದಂತಹ ಪಟ್ಟಣಗಳಿಗೆ ಅಲೆದಾಟ ಈ ಭಾಗದ ವಿದ್ಯಾರ್ಥಿಗಳಿಗೆ ಅನಿವಾರ್ಯವಾಗಿದೆ. ನಿಲೋಗಲ್ ಗ್ರಾಮ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಅತ್ಯಂತ ಹಿಂದುಳಿದ ತಾಲೂಕು ಕೇಂದ್ರ ಕುಷ್ಟಗಿಯಿಂದ ಸುಮಾರು 50 ಕಿ.ಮೀ ದೂರದಲ್ಲಿದೆ. ಜಿಲ್ಲೆ ಹಾಗೂ ಗುಲಬರ್ಗಾ ವಿಭಾಗದ ಗಡಿ ಗ್ರಾಮವಾದ ನಿಲೋಗಲದಲ್ಲಿ ಸರಕಾರಿ ಪ್ರೌಢ ಶಾಲೆ ಸ್ಥಾಪಿಸಬೇಕೆಂದು ಸಭೆಯಲ್ಲಿ ಸರಕಾರವನ್ನು ಒತ್ತಾಯಪಡಿಸುವುದಲ್ಲದೆ, ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯುವ ಮೂಲಕ ಸಭೆಯಲ್ಲಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸಭೆಯಲ್ಲಿ ನಿಲೋಗಲ್ ಗ್ರಾಮ ಸೇರಿದಂತೆ ರಾಂಪೂರ, ವಕ್ಕನದುರ್ಗಾ, ಬೊಮ್ಮನಾಳ, ಬಸಾಪೂರ, ಬಿಳೇಕಲ್ ಹಾಗೂ ಮಿಟ್ಟಲಕೋಡ ಗ್ರಾಮಸ್ಥರು ಭಾಗವಹಿಸಿ, ಕೂಡಲೇ ನಿಲೋಗಲ್ ಗ್ರಾಮದಲ್ಲಿ ಪದವಿ ಪೂರ್ವ ಕಾಲೇಜ್ ಸ್ಥಾಪಿಸಬೇಕು ಎಂಬ ಕೂಗು ಮಾತ್ರ ಜೋರಾಗಿತ್ತು. ಅಲ್ಲದೆ, ಈ ಭಾಗದ ಬಹು ದಿನಗಳ ಮನವಿ ಸರಕಾರ ಸ್ಪಂದಿಸದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವ ಎಚ್ಚರಿಕೆ ಕೂಡಾ ನೀಡಿದ ಪ್ರಸಂಗ ಜರುಗಿತು..!!