ಮಕ್ಕಳಿಗೆ ಕುತ್ತಾದ ಸ್ಯಾನಿಟೈಸರ್

 

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ (ಕುಷ್ಟಗಿ) : ಕೊರೋನಾ ರೂಪಾಂತರಿ 3ನೇ ಅಲೆ ಓಮಿಕ್ರಾನ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್ ಸಿಂಪಡಿಸುವುದಕ್ಕೆ ಅಂಗನವಾಡಿ ಸೇರಿದಂತೆ ಶಾಲಾ ಆಡಳಿತ ಮಂಡಳಿಗಳು ಮುಂದಾಗಿದ್ದು ಪುಟ್ಟ ಕಂದಮ್ಮಗಳ ಕೈಗಳಿಗೆ ಸ್ಯಾನಿಟೈಸರ್ ಮಾತ್ರ ಕುತ್ತಾಗಿ ಪರಿಣಮಿಸಿರುವುದು ಬೆಳಕಿಗೆ ಬಂದಿದೆ..!

ಜಿಲ್ಲೆಯ ಕುಷ್ಟಗಿ ತಾಲೂಕಿನ ಅಂಗನವಾಡಿ ಸೇರಿದಂತೆ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮುಂಜಾಗ್ರತೆಗಾಗಿ ಸ್ಯಾನಿಟೈಸರ್ ಬಳಕೆ ಕಡ್ಡಾಯಮಾಡಲಾಗಿದೆ. ಆದರೆ, ನಿತ್ಯ ಬಳಕೆಯಿಂದ ಅಂಗನವಾಡಿಯ ಪುಟ್ಟ ಕಂದಮ್ಮಗಳು ಸೇರಿದಂತೆ ವಿದ್ಯಾರ್ಥಿಗಳ ಮೃದು ಅಂಗೈಗಳ ಚರ್ಮದ ಮೇಲೆ ಸಾಕಷ್ಟು ಪರಿಣಾಮ ಬೀರಿದ್ದು ಕಂಡುಬರುತ್ತಿದೆ. ಸ್ಯಾನಿಟೈಸರ್ ಸಿಂಪಡಣೆ ಬಳಿಕ ಮಕ್ಕಳ ಕೈಗಳು ಬಿರುಸಾಗಿ ಪರಿಣಮಿಸುತ್ತಿವೆ. ಚಳಿಗಾಲವಾಗಿದ್ದರಿಂದ ಸಂಜೆ ವೇಳೆಗಾಗಲೇ ಮಕ್ಕಳ ಅಂಗೈಗಳ ಉರಿತದ ವೇದನೆ ಅನುಭವಿಸುವಂತಾಗಿದೆ ಎಂದು ಪಾಲಕರು ಪತ್ರಿಕೆ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಅಲ್ಲದೆ, ಸ್ಯಾನಿಟೈಜರ್ ಗುಣಮಟ್ಟದ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ. ಅಂಗನವಾಡಿ ಸೇರಿದಂತೆ ಶಾಲಾ ಮಕ್ಕಳಿಗೆ ಸ್ಯಾನಿಟೈಸರ್ ಉಪಯೋಗದ ಬದಲಾಗಿ ಸಾಬೂನು ಉಪಯೋಗದ ಸಲಹೆ ನೀಡಿದ್ದಾರೆ. ಸಾಬೂನು ಬಳಕೆಯಿಂದ ಮಕ್ಕಳ ಕೈಗಳು ಸ್ವಚ್ಛತೆ ಜೊತೆಗೆ ಅಪಾಯವನ್ನು ಸಹ ತಡೆಗಟ್ಟಬಹುದಾಗಿದೆ ಎಂಬ ಸಲಹೆ ಕೂಡಾ ನೀಡಿದ್ದಾರೆ. ಅಪಾಯದ ಮುನ್ನವೇ ಆರೋಗ್ಯ ಇಲಾಖೆ ಸೇರಿದಂತೆ ಸಂಬಂಧಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಅಂಗನವಾಡಿ ಸೇರಿದಂತೆ ಶಾಲೆಗಳ ಮುಖ್ಯ ಶಿಕ್ಷಕರುಗಳಿಗೆ ಸ್ಯಾನಿಟೈಸರ್ ಬದಲಾಗಿ ಸಾಬೂನು ಉಪಯೋಗದ ಸಲಹೆಗಳ ಮಾತುಗಳ ಕೂಡಾ ಪಾಲಕರಿಂದ ಕೇಳಿಬಂದಿವೆ..!!