ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ (ಕುಷ್ಟಗಿ) : ನಗರೊತ್ಥಾನ ಯೋಜನೆಯ ಅನುದಾನದಲ್ಲಿ ಜಿಲ್ಲೆಯ ಕುಷ್ಟಗಿ ಪಟ್ಟಣದೊಳಗಿನ ಮುಖ್ಯ ರಸ್ತೆಗಳ ಅಗಲೀಕರಣ ಹಾಗೂ ಅಭಿವೃದ್ಧಿ ಪಡಿಸಲು ಇಲ್ಲಿನ ಪುರಸಭೆಯ ಸರ್ವ ಸದಸ್ಯರು ಸಮ್ಮತಿ ವ್ಯಕ್ತಪಡಿಸಿದ ಹಿನ್ನೆಲೆ ಪಟ್ಟಣದ ಸೌಂದರ್ಯ ಹೆಚ್ಚಿಸಲು ನಿರ್ಧರಿಸಲಾಗಿತು..!
31-01-2022 ರಂದು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪುರಸಭೆಯ ಸಾಮಾನ್ಯ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಗಂಗಾಧರಯ್ಯ ಕೆ.ಹಿರೇಮಠ ಸರ್ವ ಸದಸ್ಯರುಗಳ ಗಮನಕ್ಕೆ ತಂದು, ಪಟ್ಟಣದಲ್ಲಿ ಹಾದು ಹೋಗಿರುವ ಮುಖ್ಯ ರಸ್ತೆಗಳು ಕಿರಿದಾಗಿ ದುರಸ್ತಿಗೆ ಒಳಪಟ್ಟ ಕಾರಣ ಪುರಸಭೆಗೆ ನಗರೋತ್ಥಾನ ಯೋಜನೆಯಡಿ ಮಂಜೂರಾದ ಸುಮಾರು ಹತ್ತು ಕೋಟಿ ರೂಪಾಯಿಗಳ ಅನುದಾನದಲ್ಲಿ ರಾಷ್ಟ್ರೀಯ ಚತುಷ್ಪಥ ಹೆದ್ದಾರಿಯಿಂದ ಅಂಬೇಡ್ಕರ್ ವೃತ್ತ ಬಸವೇಶ್ವರ ವೃತ್ತದ ಮಾರ್ಗವಾಗಿ ಮಾರುತಿ ವೃತ್ತ ಸೇರಿದಂತೆ ಗಜೇಂದ್ರಗಡ ರಸ್ತೆ ಸಂದೀಪ ನಗರದ ವರೆಗೂ ರಸ್ತೆ ಅಗಲೀಕರಣ ಸೇರಿದಂತೆ ಹಳೇ ವಿದ್ಯುತ್ ಕಂಬ ತೆರವು ಹಾಗೂ ಫುಟ್ಪಾತ್ ಅತಿಕ್ರಮಣ ತೆರವುಗೊಳಿಸಿ ಡಾಂಬರೀಕರಣ ಮಾಡಲಾಗುವದು. ಜತೆಗೆ ರಸ್ತೆ ಮಧ್ಯೆ ವಿದ್ಯುತ್ ದೀಪ ಅಳವಡಿಸಿ ಪಟ್ಟಣದ ಸೌಂದರ್ಯಿಕರಣ ಮಾಡಲು ಉದ್ದೇಶಿಸಲಾಗಿದೆ. ಇದಕ್ಕೆ ಸರ್ವ ಸದಸ್ಯರ ಒಪ್ಪಿಗೆ ಕೇಳಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸರ್ವ ಸದಸ್ಯರು, ಬಹಳ ವರ್ಷಗಳಿಂದ ಮುಖ್ಯ ರಸ್ತೆಗಳು ದುರಸ್ತಿಗೆ ಒಳಪಟ್ಟು ದೂಳು ತುಂಬಿಕೊಂಡಿರುವದರಿಂದ ಜನ ತೊಂದರೆ ಅನುಭವಿಸುತಿದ್ದಾರೆ. ಹಾಗಾಗಿ ನಗರೊತ್ಥಾನ ಯೋಜನೆಯ ಅನುದಾನವನ್ನು ವಾರ್ಡಗಳ ಅಭಿವೃದ್ಧಿಗೆ ನಿರಾಕರಿಸಿ ಮುಖ್ಯ ರಸ್ತೆಗಳ ಅಭಿವೃದ್ಧಿಗೆ ಸಂಪೂರ್ಣ ಅನುದಾನ ಬಳಸಿಕೊಳ್ಳಲು ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.
ಜತೆಗೆ ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ವೃತ್ತದ ವರೆಗಿನ ಮುಖ್ಯ ರಸ್ತೆಯುದ್ದಕ್ಕೂ ಇರುವ ಬೀದಿ ದೀಪಗಳ ಅಳವಡಿಕೆಗೂ ಸಹ ಅಧ್ಯಕ್ಷ ಗಂಗಾಧರಯ್ಯ ಕೆ.ಹಿರೇಮಠ ಅವರು ಸದಸ್ಯರಿಂದ ಸಮ್ಮತಿ ಪಡೆದುಕೊಂಡರು.
ಜಟಾಪಟಿ : ಈಗಿರುವ ಎಸ್.ಎಫ್.ಸಿ. ಅನುದಾನದಲ್ಲಿ ಗಣೇಶ್ ಪ್ರಸಾದ ಹೋಟೇಲನಿಂದ ಮಲ್ಲಯ್ಯ ವೃತ್ತದ ವರೆಗಿನ ರಸ್ತೆ ಡಾಂಬರೀಕರಣ ಹಾಗೂ ಇತರೆ ಅಭಿವೃದ್ಧಿ ಕಾರ್ಯಗಳಿಗೆ ಬಳಸುವ ಕುರಿತು ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಕೈ ಸದಸ್ಯರು ತಮ್ಮ ಶಾಸಕರು ಪಟ್ಟಣಕ್ಕೆ ಹೆಚ್ಚುವರಿ ಅನುದಾನ ಹಾಕಿಸಿದ್ದಾರೆ ಈ ಕುರಿತು ಹೇಳಬೇಕು ಎಂದು ಅಧ್ಯಕ್ಷಗೆ ಪಟ್ಟು ಹಿಡಿದರು. ಮಧ್ಯೆ ಪ್ರವೇಶಿಸಿದ ಬಿಜೆಪಿ ಸದಸ್ಯ ಕಲ್ಲೇಶ ತಾಳದ, ಪಟ್ಟಣದ ಅಭಿವೃದ್ಧಿ ಪಡಿಸಲು ನಾಲ್ಕು ವರ್ಷಗಳ ನಂತರ ಜ್ಞಾನೋದಯವಾಯಿತು ಎಂದು ವ್ಯಂಗ್ಯವಾಡಿದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕೈ ಸದಸ್ಯರು, ಬಿಜೆಪಿ ಸದಸ್ಯರೋಂದಿಗೆ ಕೆಲ ಹೊತ್ತು ಮಾತಿನ ಜಟಾಪಟಿ ನಡೆಸಿದರು. ಬಳಿಕ ಕುಮಾರಸ್ವಾಮಿ ಸರ್ಕಾರ ಇದ್ದಾಗ ಮಂಜೂರಾಗಿದ್ದ ಅನುದಾನವನ್ನು ಬಿಎಸ್ವೈ ಸರ್ಕಾರ ಹಿಂದಕ್ಕೆ ಪಡೆಯಿತು. ಹಾಗಾಗಿ ತಮ್ಮ ಶಾಸಕರೇ ಒತ್ತಡ ತಂದು ಅನುದಾನ ತಂದಿದ್ದಾರೆ ಎಂದರು. ಆಕ್ಷೇಪ ವ್ಯಕ್ತಪಡಿಸಿದ ಕಮಲ ಸದಸ್ಯರು, ಶಾಸಕ ಹಾಗೂ ಸರ್ವ ಸದಸ್ಯರ ನಿಯೋಗ ಸಿಎಂ ಭೇಟಿಯಾಗಿ ಅನುದಾನ ಮಂಜೂರು ಮಾಡಿಸಲಾಗಿತು ಎಂದಾಗ ಸಭೆ ಶಾಂತವಾಯಿತು.
ಶಾಸಕರ ತಾರತಮ್ಯ : ಕೆಕೆಆರ್ ಡಿಬಿ ಯೋಜನೆಯಡಿ ಶಾಸಕ ಅಮರೇಗೌಡ ಬಯ್ಯಾಪೂರ ಅವರು ತಮ್ಮ ಕಾಂಗ್ರೆಸ್ ಸದಸ್ಯರು ಆಯ್ಕೆಗೊಂಡ ಪ್ರತಿ ವಾರ್ಡಗಳಿಗೆ ಅನುದಾನ ನೀಡಿದರು. ಬಿಜೆಪಿ ಸದಸ್ಯರ ವಾರ್ಡಿಗೆ ಅನುದಾನ ಹಂಚಲಿಲ್ಲ ಎಂದು ಬಿಜೆಪಿ ಸದಸ್ಯರು ಆರೋಪಿಸಿದರು. ಪುರಸಭೆ ಅಧ್ಯಕ್ಷ ಕೂಡಾ ಶಾಸಕರ ನಡೆಯನ್ನು ಮೂಖ ಪ್ರೇಕ್ಷಕರಂತೆ ನೋಡಿದ್ದೇವೆ. ಶಾಸಕರೇ ಕ್ರಿಯಾ ಯೋಜನೆ ಸಿದ್ಧಪಡಿಸಿ ತಮ್ಮ ಸದಸ್ಯರಿರುವ ವಾರ್ಡಗಳಿಗೆ ಅನುದಾನ ಹಂಚಿದರು ಎಂದು ಧ್ವನಿಗೂಡಿಸಿದರು. ಈ ವಿಷಯದ ಕುರಿತು ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ಕೆಲ ಹೊತ್ತು ಮಾತಿನ ಚಕಮಕಿಯೂ ನಡೆಯಿತು.
ನಂತರ ಸಭೆಯಲ್ಲಿ ಪತ್ರಕರ್ತರಿಗೆ ನಿವೇಶನ ಹಂಚಿಕೆ ಕುರಿತು, ಪುರಸಭೆಯ ವಾರ್ಷಿಕ ಜಮಾ ಕರ್ಚು, ದಿನದ ಸಂತೆ, ವಾರದ ಸಂತೆ, ದನದ ಸಂತೆ ಲಿಲಾವು ಕುರಿತು ಹಾಗೂ ಪುರಸಭೆ ವಾಣಿಜ್ಯ ಮಳಿಗೆಗಳ ಲಿಲಾವು ನಡೆಸುವ ಕುರಿತು ಚರ್ಚೆಗಳು ನಡೆದವು.
ಉಪಾಧ್ಯಕ್ಷೆ ಹನುಮವ್ವ ಅಯ್ಯಪ್ಪ ಕೋರಿ, ಮುಖ್ಯಾಧಿಕಾರಿ ಉಮೇಶ ಕೆ.ಹಿರೇಮಠ ಮತ್ತು ಪುರಸಭೆ ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.