ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರು ಇವರ ಅಧ್ಯಕ್ಷತೆಯಲ್ಲಿ ಮೂರು ಜನ ಸದಸ್ಯರನ್ನೊಳಗೊಂಡಿರುವ ಕುಷ್ಟಗಿ ಕ್ಷೇತ್ರದಲ್ಲಿ ಬಗರ್ ಹುಕುಂ ಸಕ್ರಮೀಕರಣ ಸಾಗವಳಿ ಸಮಿತಿ ರಚಿಸಿ ಸರಕಾರ ಆದೇಶ ಹೊರಡಿಸಿದೆ..!
ಕುಷ್ಟಗಿ ತಾಲೂಕಿನ ಮೂಕರ್ತಿನಾಳ ಗ್ರಾಮದ ಶರಣಪ್ಪ ಗಂಜ್ಯಾಳ, ತಾವರಗೇರಾದ ಲಕ್ಷ್ಮಣ ಮುಖಿಯಾಜಿ ಹಾಗೂ ಕುಷ್ಟಗಿಯ ಮಯೂರಿ ರಾಚಪ್ಪ ಮಾಟಲದಿನ್ನಿ ಇವರುಗಳನ್ನು ಸದಸ್ಯರನ್ನಾಗಿ ನೇಮಕಗೊಳಿಸಿದ ಕಂದಾಯ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರಪ್ಪ ದಿನಾಂಕ 25-02-2022 ರಂದು ಆದೇಶ ಹೊರಡಿಸಿದ್ದಾರೆ. ಸಮಿತಿಗೆ ತಹಸೀಲ್ದಾರರು ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ರ ಪ್ರಕರಣ 94 ಎ (1) ಪ್ರದತ್ತವಾದ ಅಧಿಕಾರದ ಮೂಲಕ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸಮಿತಿ ಜಾರಿಯಲ್ಲಿರುತ್ತದೆ..!!
‘ಬಗರ್ ಹುಕುಂ’ ಯೋಜನೆ ಅಂದರೇನು ? : ಬಗರ್ ಹುಕುಂ ಅಥವ ಕೃಷಿ ಜಮೀನು ಅಕ್ರಮ ಸಕ್ರಮ ಅಂದರೆ ಅನಾದಿ ಕಾಲದಿಂದ ರೈತರು ಸರಕಾರಿ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಬರುತ್ತಿದ್ದು, ಅವರ ಹೆಸರಿಗೆ ಖಾತೆ ಆಗಿರುವುದಿಲ್ಲ. ಇಂತಹ ಜಮೀನುಗಳನ್ನು ನಿಯಮ ಪ್ರಕಾರ ಕೃಷಿ ಮಾಡುವ ರೈತನಿಗೆ ಕೆಲವು ನಿಬಂಧನೆ ಮತ್ತು ಷರತ್ತುಗಳ ಪ್ರಕಾರ ಖಾತೆ ಮಾಡಿಕೊಡುವುದಾಗಿದೆ. ಅರ್ಥಾತ್, ಸರಕಾರಿ ಜಮೀನಿನಲ್ಲಿ ಇಲ್ಲಿಯವರೆಗೂ ಕೈಗೊಂಡಿದ್ದ ಅಕ್ರಮ ಸಾಗುವಳಿಯನ್ನು ಸಕ್ರಮ ಮಾಡುವುದು..!