ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ರಾಜ್ಯದಲ್ಲಿ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆಗೆ ಬಜೆಟ್ ನಲ್ಲಿ ಪ್ರಸ್ತಾಪಿಸುವ ಮೂಲಕ ಪ್ರತ್ಯೇಕ ಹಣ ಮೀಸಲಿಡಬೇಕು ಎಂಬ ಒತ್ತಾಯ ಕ್ರೀಡಾ ವಲಯದಲ್ಲಿ ಕೇಳಿಬರುತ್ತಿದೆ..!
ಅತ್ಯಂತ ಕ್ರಿಯಾಶೀಲ ಮುಖ್ಯಮಂತ್ರಿ ಹೆಗ್ಗಳಿಕೆ ಎಂಬ ಪಾತ್ರವಾಗಿರುವ ಬಸವರಾಜ ಬೊಮ್ಮಾಯಿ ಅವರು ಮಂಡಿಸಲಿರುವ ಚೊಚ್ಚಲ ಬಜೆಟ್ ನಲ್ಲಿ ರಾಜ್ಯದ ಜನತೆ ಸಾಕಷ್ಟು ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಅದರಲ್ಲಿ ವಿಶೇಷವಾಗಿ ಕ್ರೀಡಾಸಕ್ತರಂತು ಕ್ರೀಡೆಗಳ ಉತ್ತೇಜನಕ್ಕಾಗಿ ಪ್ರತ್ಯೇಕ “ಕ್ರೀಡಾ ವಿಶ್ವವಿದ್ಯಾಲಯ” ಸ್ಥಾಪನೆಯ ಕನಸು ಕಾಣುತ್ತಿದ್ದಾರೆ. ಕ್ರೀಡಾ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿರುವ ಕರ್ನಾಟಕ ರಾಜ್ಯದಲ್ಲಿ ಕ್ರೀಡಾ ವಿವಿ ಸ್ಥಾಪನೆ ಬೇಡಿಕೆ ಬಹಳ ದಿನಗಳ ಹಳೆಯದಾಗಿದೆ.
ರಾಜ್ಯದಲ್ಲಿ ಕನ್ನಡ ವಿವಿ ಸೇರಿದಂತೆ ತೋಟಗಾರಿಕೆ, ಕೃಷಿ, ಜಾನಪದ ಅನೇಕ ವಿಶ್ವವಿದ್ಯಾಲಯಗಳು ಈಗಾಗಲೇ ಮೂಲ ಆಶಯಗಳಂತೆ ಸಾಕಷ್ಟು ಅಭಿವೃದ್ಧಿ ಕಂಡಿವೆ. ಆದರೆ, ಕ್ರೀಡಾ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದ ಕರ್ನಾಟಕ ರಾಜ್ಯದಲ್ಲಿ ಕ್ರೀಡಾ ವಿಶ್ವವಿದ್ಯಾಲಯದ ಅವಶ್ಯಕತೆ ಸಾಕಷ್ಟಿದೆ. ಶಾರೀರಿಕ ಶಿಕ್ಷಣದ ಆವಿಷ್ಕಾರದಿಂದ ಹಿಡಿದು ಕ್ರೀಡಾ ಕ್ಷೇತ್ರದಲ್ಲಿ ರಾಜ್ಯದ ಕ್ರೀಡಾ ಪಟುಗಳ ಸಾಧನೆ, ಸಮಗ್ರ ಕ್ರೀಡೆಗಳ ಅಭಿವೃದ್ಧಿಗೆ ಕ್ರೀಡಾ ವಿವಿ ಸ್ಥಾಪನೆ ಅವಶ್ಯಕವಾಗಿದೆ.
ದೇಶ ವಿದೇಶಗಳ ಪದಕಗಳ ಪಟ್ಟಿ ಗಮನಿಸುವಾಗ ಮಾತ್ರ ಕ್ರೀಡೆಯ ಹಾಗೂ ಕ್ರೀಡಾಪಟುಗಳ ಅಭಿವೃದ್ಧಿಯ ಮೂಲ ನೆನಪಾಗುವ ರಾಜಕಾರಣಿಗಳಿಗೆ ಕ್ರೀಡೆಗಾಗಿಯೇ ಪ್ರತ್ಯೇಕ ಕ್ರೀಡಾ ವಿವಿ ಏತಕ್ಕೆ ಸ್ಥಾಪಿಸಬಾರದು..? ಎಂಬ ಅಬ್ಬರದ ಧ್ವನಿ ಹೆಚ್ಚಾಗ ತೊಡಗಿದೆ. ಇಡೀ ಮನುಕುಲದ ಆರೋಗ್ಯ ಕ್ರೀಡೆಗಳ ಮೇಲೆ ನಿಂತಿದೆ ಎಂಬ ಘೋಷಣೆಯಲ್ಲಿಯೂ ಕ್ರೀಡಾ ಸ್ಥಾಪನೆಗೇತಕ್ಕೆ ಹಿಂದೇಟು ಎಂಬ ಆರೋಪ ಪ್ರತಿವೊಬ್ಬ ಕ್ರೀಡಾಪಟುಗಳದ್ದು. ಅವೈಜ್ಞಾನಿಕ ಯೋಜನೆಗಳಿಗೆ ಅಭಿವೃದ್ಧಿ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಅನುದಾನ ಹಾಳು ಮಾಡುವ ಸರಕಾರಗಳು ಕ್ರೀಡಾ ವಿವಿ ಯಂತಹ ಜೀವಂತ ದೇವಾಲಯಗಳಿಗೆ ಏಕೆ ಪ್ರಾಶಸ್ತ್ಯ ನೀಡಿ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಪದಕಗಳ ಪಟ್ಟಿಯಲ್ಲಿ ಭಾರತದ ತ್ರೀವಣ ಧ್ವಜವನ್ನು ಮೊದಲ ಸ್ಥಾನದಲ್ಲಿ ಏಕೆ ಕಾಣಬಾರದು ಎಂಬುದು ಕ್ರೀಡಾ ಕ್ಷೇತ್ರದಲ್ಲಿನ ಪರಿಣತರ ಬೇಡಿಕೆ ಕೂಡಾ ಹೌದಾಗಿದೆ.
ಉತ್ತರ ಕರ್ನಾಟಕದವರೇ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಮೊದಲ ಬಜೆಟ್ ನಲ್ಲಿ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆಗೆ ಅನುದಾನ ಮೀಸಲಿಡಬೇಕೆಂಬುದು ಲಕ್ಷಾಂತರ ಜನ ಕ್ರೀಡಾಭಿಮಾನಿಗಳ ಆಶಯ..!!