ಡೊಣ್ಣೆಗುಡ್ಡ ಜಾತ್ರೆ ಪ್ರಾಣಿ ಬಲಿ ತಡೆಗೆ ಕ್ರಮ : ಬಸವಣ್ಣೆಪ್ಪ ಕಲ್ಲಶೆಟ್ಟಿ

 

 

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ (ಕುಷ್ಟಗಿ) : ಪ್ರತಿ ಮೂರು ವರ್ಷಕ್ಕೆ ಒಂದು ಬಾರಿ ನಡೆಯುವ ಜಿಲ್ಲೆಯ ಕುಷ್ಟಗಿ ತಾಲೂಕಿನ ಡೊಣ್ಣೆಗುಡ್ಡ ದುರ್ಗಾದೇವಿ ಜಾತ್ರೆ ದೇವಿಯ ಹೆಸರಿನಲ್ಲಿ ಪ್ರಾಣಿಗಳ ಮಾರಣ ಹೋಮಕ್ಕೆ ಕುಖ್ಯಾತಿ ಹೊಂದಿದ್ದು, ಇದನ್ನು ತಡೆಯಲು ದಿನಾಂಕ 02-03-2022 ರಂದು ಜಿಲ್ಲಾಡಳಿತ ಹಾಗೂ ಖಾಕಿಪಡೆ ಸಜ್ಜಾಗಿ ನಿಂತಿರುವುದು ಕಂಡುಬಂದಿತು.
ಈ ಜಾತ್ರೆಯಲ್ಲಿ ಪ್ರಾಣಿಗಳನ್ನು ಬಲಿ ನೀಡದಂತೆ ಜನರ ಮನ ಪರಿವರ್ತನೆಗೊಳಿಸುವುದಕ್ಕೆ ಕಳೆದೊಂದು ವಾರದಿಂದಲೂ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದಸ್ವಾಮಿ ಮತ್ತು ಅವರ ತಂಡದವರು, ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಜಿಲ್ಲಾಧಿಕಾರಿ ಅವರ ಆದೇಶದ ಮೇರೆಗೆ ಅನೇಕ ಬಾರಿ ಸಭೆ ನಡೆಸಿದ್ದರು.

ಅಸಿಸ್ಟೆಂಟ್ ಕಮಿಷನರ್ ಬಸವಣ್ಣೆಪ್ಪ ಕಲ್ಲಶೆಟ್ಟಿ, ಕುಷ್ಟಗಿ ತಹಸೀಲ್ದಾರ್ ಎಂ.ಸಿದ್ದೇಶ, ಗಂಗಾವತಿ ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ, ಕುಷ್ಟಗಿ ಸಿಪಿಐ ನಿಂಗಪ್ಪ ಎನ್.ಆರ್., ಹನುಮಸಾಗರ, ಕುಷ್ಟಗಿ, ತಾವರಗೇರಾ ಪಿಎಸ್ಐಗಳು ಹಾಗೂ ಪಶು ಸಂಗೋಪನಾ ಇಲಾಖೆ ವೈದ್ಯಾಧಿಕಾರಿಗಳು ಗ್ರಾಮದ ಬೀದಿಗಳಲ್ಲಿ ಸಂಚರಿಸಿ ಗ್ರಾಮಸ್ಥರಿಗೆ ಹಾಗೂ ಜಾತ್ರೆಗೆ ಆಗಮಿಸಿದ್ದ ಸಾರ್ವಜನಿಕರಲ್ಲಿ ಪ್ರಾಣಿ ಹತ್ಯೆ ಮಾಡದಂತೆ ಜಾಗೃತಿ ಜಾಥಾ ನಡೆಸಿದರು..!!