ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ (ಕುಷ್ಟಗಿ) : ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರ ಆರಂಭಿಸಲು ವಿದ್ಯಾರ್ಥಿಗಳು ಸೇರಿದಂತೆ ಪಾಲಕರು ಒತ್ತಾಯಪಡಿಸಿದ್ದಾರೆ..!
581 ಕ್ಕೂ ಅಧಿಕ ವಿದ್ಯಾರ್ಥಿಗಳು ತಾವರಗೇರಾ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಕುಷ್ಟಗಿ ಡಿಗ್ರಿ ಕಾಲೇಜಿನಲ್ಲಿ ಜರಗುವ ಪರೀಕ್ಷೆಗಳಿಗೆ ಇಲ್ಲಿಯವರೆಗೂ ತಾವರಗೇರಾ ಪಟ್ಟಣದ ವಿದ್ಯಾರ್ಥಿಗಳು ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ದೂರದ ಕುಷ್ಟಗಿ ಪಟ್ಟಣಕ್ಕೆ ಆಗಮಿಸುವಂತಾಗಿದೆ. ಪರೀಕ್ಷಾ ಕೇಂದ್ರದ ವ್ಯವಸ್ಥೆಗೆ ವಿದ್ಯಾರ್ಥಿಗಳು ಹಾಗೂ ಪಾಲಕರು ತೀವ್ರ ವಿರೋಧ ವ್ಯಕ್ತಪಡಿಸಿ, ತಾವರಗೇರಾದಲ್ಲಿಯೇ ಪರೀಕ್ಷೆ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿದ್ದಾರೆ.
ಈ ಕುರಿತು ‘ಕೃಷಿ ಪ್ರಿಯ’ ಪತ್ರಿಕೆಗೆ ತಾವರಗೇರಾ ಡಿಗ್ರಿ ಕಾಲೇಜು ಪ್ರಾಂಶುಪಾಲ ಲೋಹಿತ್ ಅವರು ತಿಳಿಸಿದ್ದಿಷ್ಟು, ತಮ್ಮ ಕಾಲೇಜಿನಲ್ಲಿ 581 ಜನ ವಿದ್ಯಾರ್ಥಿಗಳು ಎಡ್ಮೀಷನ್ ಪಡೆದುಕೊಂಡಿದ್ದಾರೆ. ನೂತನ ಸುಸಜ್ಜಿತವಾದ ಕಟ್ಟಡವೂ ನಮ್ಮ ಕಾಲೇಜು ಹೊಂದಿದೆ. ಆದರೆ, ಹಿರೇವಂಕಲಕುಂಟಾ ಡಿಗ್ರಿ ಕಾಲೇಜಿನಲ್ಲಿ ಕೇವಲ ಸುಮಾರು 300 ಜನ ವಿದ್ಯಾರ್ಥಿಗಳು ದಾಖಲಾತಿ ಇದ್ದರೂ ಅಲ್ಲಿ ಪರೀಕ್ಷಾ ಕೇಂದ್ರ ತೆರೆಯಲು ವಿಶ್ವವಿದ್ಯಾಲಯದಿಂದ ಅನುಮತಿ ನೀಡಲಾಗಿದೆ. ಆದರೆ, ತಾವರಗೇರಿಗೂ ಪರೀಕ್ಷಾ ಕೇಂದ್ರ ಮಂಜೂರು ಮಾಡುವಂತೆ 04-03-2022 ರಂದು ವಿಶ್ವವಿದ್ಯಾಲಯದ ಕುಲಸಚಿವರಿಗೆ (ಮೌಲ್ಯಮಾಪನ ವಿಭಾಗಕ್ಕೆ) ಮನವಿ ಪತ್ರ ಸಲ್ಲಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ..!!