ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರ ಎಂಬ ಗ್ರಾಮದಲ್ಲಿ ಮೂರು ಜನ ಕ್ರೀಡಾಪಟುಗಳು ಬಾಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಯೂನಿವರ್ಸಿಟಿ ‘ಬ್ಲೂ’ ಗಳಾಗಿ ಹೊರಹೊಮ್ಮಿರುವುದು ವಿಶೇಷ..!
ಹನುಮಸಾಗರ ಬಾಲ್ ಬ್ಯಾಡ್ಮಿಂಟನ್ ಕ್ಲಬ್ ಪದಾಧಿಕಾರಿಗಳ ಗರಡಿಯಲ್ಲಿ ಬೆಳೆದಿರುವ ಸಮೀರ್ ನಾಲಬಂದ್, ಯಶವಂತ ರಾಯಬಾಗಿ ಹಾಗೂ ವಿಶಾಲ್ ರಾಯಬಾಗಿ ಯೂನಿವರ್ಸಿಟಿ ಬ್ಲೂ ಆಗಿರುವ ವಿಶೇಷ ಮೂರು ಜನ ಕ್ರೀಡಾಪಟುಗಳು. ಪ್ರೌಢ ಶಾಲಾ ಹಂತದಿಂದಲೇ ಬಾಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಪಳಗಿರುವ ಕ್ರೀಡಾಪಟುಗಳು ಕಾಲೇಜು ಹಂತದಲ್ಲಿ ತಾಲೂಕಾ ಹಾಗೂ ಜಿಲ್ಲಾ ಮಟ್ಟದಲ್ಲಿ ಸ್ಥಾನಗಳನ್ನು ಗಳಿಸಿ, ಈ ಭಾಗದಲ್ಲಿ ಹೆಮ್ಮೆಯ ಕ್ರೀಡಾಪಟುಗಳಾಗಿ ಮುಂಚುನಿಯಲ್ಲಿದ್ದವರು.
ಕ್ರೀಡಾಪಟುಗಳ ಪರಿಚಯ :
ಸಮೀರ್ ನಾಲಬಂದ್ :
ಹನುಮಸಾಗರದ ದಾವಲಸಾಬ್ ನಾಲಬಂದ ಅವರ ಮಗ ಸಮೀರ ನಾಲಬಂದ ಬಾಗಲಕೋಟೆ ಜಿಲ್ಲೆಯ ಇಲಕಲ್ಲ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಮೊದಲನೇ ಸೆಮಿಸ್ಟರ್ ನಲ್ಲಿ ಅಭ್ಯಾಸ ಮಾಡುತ್ತಿದ್ದಾನೆ. ಅತ್ಯಂತ ಕ್ರಿಯಾಶೀಲ ಕ್ರೀಡಾಪಟುಗಳಲ್ಲಿ ಇತನೊಬ್ಬನಾಗಿ ಹೊರಹೊಮ್ಮಿದ್ದಾನೆ.
ಯಶವಂತ ರಾಯಬಾಗಿ :
ಸ್ಥಳೀಯ ಹನುಮಸಾಗರದ ವಸಂತ ರಾಯಬಾಗಿ ಅವರ ಪುತ್ರ ಯಶವಂತ ರಾಯಬಾಗಿ ಬಾಗಲಕೋಟೆ ಜಿಲ್ಲೆಯ ಇಲಕಲ್ಲ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಬಿ.ಕಾಂ 5 ಸೆಮಿಸ್ಟರ್ ನಲ್ಲಿ ಅಭ್ಯಾಸ ಮಾಡುತ್ತಿದ್ದಾನೆ. ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಬಾಲ್ ಬ್ಯಾಡ್ಮಿಂಟನ್ ಕ್ರೀಡೆಗೆ ಬ್ಲೂ ಆಗಿ ಆಯ್ಕೆಯಾಗಿದ್ದಾನೆ.
ವಿಶಾಲ್ ರಾಯಬಾಗಿ :
ಧರ್ಮಾಸಾ ರಾಯಬಾಗಿ ಅವರ ಪುತ್ರ ವಿಶಾಲ್ ರಾಯಬಾಗಿ ಪಕ್ಕದ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಎಸ್.ಎಮ್.ಭೂಮರಡ್ಡಿ ಪದವಿ ಕಾಲೇಜಿನಲ್ಲಿ ಬಿ.ಕಾಂ 3 ನೇ ಸೆಮಿಸ್ಟರ್ ನಲ್ಲಿ ಅಭ್ಯಾಸ ಮಾಡುತ್ತಿದ್ದಾನೆ.
ಚೆನ್ನೈ ನಲ್ಲಿ ಪೈಪೋಟಿ : ಮಾರ್ಚ 11 ಹಾಗೂ 12 ರಂದು ಜರಗುವ ಅಂತರ ವಿಶ್ವವಿದ್ಯಾಲಯಗಳ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ ಈ ಮೂರು ಜನ ಕ್ರೀಡಾಪಟುಗಳು ಪೈಪೋಟಿ ನೀಡಲಿದ್ದಾರೆ. ಇಲ್ಲಿ ಪ್ರಬಲ ಪೈಪೋಟಿ ನೀಡಲಿದ್ದಾರೆ ಎಂದು ಹಿರಿಯ ದೈಹಿಕ ಶಿಕ್ಷಣ ಶಿಕ್ಷಕ ಅಬ್ದುಲ್ ಕರಿಂ ಒಂಟೆಳ್ಳಿಯವರು ಹೆಮ್ಮೆಯಿಂದ ಹೇಳುತ್ತಾರೆ.
ಸಹೋದರರಿಗೆ ಸವಾಲ್ : ಯಶವಂತ ರಾಯಬಾಗಿ ಹಾಗೂ ವಿಶಾಲ್ ರಾಯಬಾಗಿ ಇವರಿಬ್ಬರು ಸಹೋದರರ ಮಕ್ಕಳು ಆದರೆ, ಬೇರೆ ಬೇರೆ ವಿಶ್ವವಿದ್ಯಾಲಯಗಳಿಂದ ಬಾಲ್ ಬ್ಯಾಡ್ಮಿಂಟನ್ ಕ್ರೀಡೆಗೆ ಆಯ್ಕೆಯಾಗಿರುವುದರಿಂದ ಚೆನ್ನೈನಲ್ಲಿ ನಡೆಯಲಿರುವ ಅಂತರ ವಿಶ್ವವಿದ್ಯಾಲಯ ಸ್ಪರ್ಧೆಯಲ್ಲಿ ಇವರಿಬ್ಬರ ನಡುವೆ ಪೈಪೋಟಿ ನಡೆಯಬಹುದಾಗಿದೆ. ಈ ಪೈಪೋಟಿಯಲ್ಲಿ ಯಾವ ಸಹೋದರನ ಮಗ ಜಯಶಾಲಿಯಾಗಲಿದ್ದಾರೆ ಎಂಬುದೇ ವಿಶೇಷ.
ಪದವಿ ಕಾಲೇಜ್ ಇಲ್ಲ : ದುರಂತ ಅಂದ್ರೆ , ಕುಷ್ಟಗಿ ತಾಲೂಕಿನಲ್ಲಿಯೇ ಒಂದೇ ಒಂದು ಪದವಿ ಕಾಲೇಜು, ಅದು ಕುಷ್ಟಗಿ ಕೇಂದ್ರ ಸ್ಥಾನದಲ್ಲಿದೆ. ಪ್ರತಿಭಾವಂತ ಕ್ರೀಡಾಪಟುಗಳು ಬೇರೆ ಜಿಲ್ಲೆಗಳಿಗೆ ಪದವಿ ಶಿಕ್ಷಣಕ್ಕಾಗಿ ನಿತ್ಯ ಅಲೆದಾಡಬೇಕಾಗಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕು ಶೈಕ್ಷಣಿಕವಾಗಿ ಹಿಂದುಳಿದಿದೆ ಎಂಬುದಕ್ಕೆ ಈ ಮೂರು ಜನ ಕ್ರೀಡಾಪಟುಗಳು ಆಯ್ಕೆಯಾಗಿರುವ ಬೇರೆ ಜಿಲ್ಲೆಗಳ ಕಾಲೇಜುಗಳೇ ಸಾಕ್ಷಿಯಾಗಿವೆ. ಇನ್ನಾದರೂ ಇಲ್ಲಿನ ಚುನಾಯಿತ ಪ್ರತಿನಿಧಿಗಳು ಹನುಮನಾಳ, ಹನುಮಸಾಗರ ಹಾಗೂ ತಾವರಗೇರಾದಲ್ಲಿ ಪದವಿ ಕಾಲೇಜ ಸ್ಥಾಪಿಸಬೇಕೆಂಬುದು ಈ ಭಾಗದವರ ಒತ್ತಾಯ..!!