ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ (ಕುಷ್ಟಗಿ) : ಸ್ಥಗಿತಗೊಂಡಿರುವ ೨೦೧೮ ರಿಂದ ೨೦೨೨ ರ ವರೆಗಿನ ಕಲ್ಯಾಣ ಕರ್ನಾಟಕ ಭಾಗದ ಲೇಖಕರ ಪುಸ್ತಕಗಳ ಖರೀದಿಸಿ ಲೇಖಕರನ್ನು ಹಾಗೂ ಈ ಭಾಗದ ಸಾಹಿತ್ಯವನ್ನು ಪ್ರೋತ್ಸಾಹಿಸಲು ಕಲಬುರಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಸಮಿತಿ ಅಧ್ಯಕ್ಷರಿಗೆ ಕೇಂದ್ರ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಪ್ರತಿನಿಧಿ ನಬಿಸಾಬ ಕುಷ್ಟಗಿ ಒತ್ತಾಯಿಸಿದ್ದಾರೆ..!
ಈ ಕುರಿತು ಅವರು ಬರೆದ ಪತ್ರದಲ್ಲಿ ತಿಳಿಸಿದ್ದಿಷ್ಟು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರ್ಥಿಕತೆಯ ಪ್ರೋತ್ಸಾಹ ಇರದ ಕಾರಣ ಸಾಹಿತ್ಯದ ಕೊರತೆ ಎದ್ದು ಕಾಣುತ್ತಿದೆ. ಈ ಭಾಗದಲ್ಲಿ ಹಿಂದಿನಿಂದಲೂ ಸಾಹಿತ್ಯ, ಜನಪದ, ಕಾವ್ಯ, ನಾಟಕ, ಇತಿಹಾಸ ರಚನೆಯ ಹಾಗೂ ದಾಖಲಾತಿಯ ಕೊರಗು ಇದೆ. ಅಲ್ಲದೆ, ಲೇಖಕರು ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿರುವ ಕಾರಣ ಅವರಿಂದ ಹೊಸ ಸಾಹಿತ್ಯ ರಚನೆಯಾಗುತ್ತಿಲ್ಲ. ನಿರುಪಯುಕ್ತವಾಗಿರುವ ಕಲ್ಯಾಣ ಕರ್ನಾಟಕ ಅನುದಾನದಲ್ಲಿ, ಸಾರ್ವಜನಿಕ ಗ್ರಂಥಾಲಯದಿಂದ ಮಾನ್ಯತೆ ಪಡೆದಿರುವ ೨೦೧೮ ರಿಂದ ೨೦೨೨ ರ ವರೆಗಿನ ಈ ಭಾಗದ ಲೇಖಕರ ಪುಸ್ತಕಗಳನ್ನು ಕನಿಷ್ಟ ಮಟ್ಟದಲ್ಲಾದರೂ ಖರೀದಿಸಬೇಕು. ಮುಂದೆ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯುವ ಸಭೆಯಲ್ಲಿ ಈ ವಿಷಯ ಚರ್ಚಿಸಿ ಕೇಂದ್ರ ಕಸಾಪ ಅಧ್ಯಕ್ಷರ ಮೂಲಕ ಸರ್ಕಾರಕ್ಕೆ ಪರಿಷತ್ತಿನಿಂದ ಮನವಿ ಸಲ್ಲಿಸಲಾಗುವುದು. ಕಲ್ಯಾಣ ಕರ್ನಾಟಕ ಪ್ರತಿನಿಧಿಸುವ ಎಲ್ಲ ಜಿಲ್ಲೆಯ ಶಾಸಕರುಗಳಿಗೆ, ಕಸಾಪ ಜಿಲ್ಲಾ ಅಧ್ಯಕ್ಷರ ಮುಖಾಂತರ ಮನವಿ ಸಲ್ಲಿಸಲು ಕೋರಿದ್ದಾರೆ. ಕಸಾಪ ಕುಷ್ಟಗಿ ತಾಲೂಕ ಅಧ್ಯಕ್ಷ ವೀರೇಶ್ ಬಂಗಾರಶೆಟ್ಟರ್ ಸೇರಿದಂತೆ ಇನ್ನಿತರರಿದ್ದರು..!!