ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ (ಕುಷ್ಟಗಿ) : ಎಲ್ಲಾ ಪಕ್ಷದ ಮುಖಂಡರುಗಳಿಂದಲೂ ಗೌರವ, ಮೆಚ್ಚುಗೆ ಗಳಿಸಿದ್ದ ಅಜಾತಶತ್ರು ನೇರ ನುಡಿಯ ರಾಜಕೀಯ ಮುತ್ಸದ್ದಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಲ್ಲಿ ಸಭಾ ಭವನ ಹಾಗೂ ದೇಶ ಕಂಡ ಶ್ರೇಷ್ಠ ವಿಜ್ಞಾನಿಯಾಗಿದ್ದ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಹೆಸರಲ್ಲಿ ಶಾಲೆ ತೆರೆದು ಗ್ರಾಮೀಣ ಭಾಗದ ಜನರಿಗೆ ಅನುಕೂಲ ಕಲ್ಪಿಸುತ್ತಿರುವ ಸಮಾಜ ಸೇವಕ, ಗುತ್ತಿಗೆದಾರ ರೇಹಮಾನಸಾಬ ದೊಡ್ಡಮನಿ ಅವರ ಕಾರ್ಯ ಶ್ಲಾಘನೀಯ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು..!
ಜಿಲ್ಲೆಯ ಕುಷ್ಟಗಿ ತಾಲೂಕಿನ ಹಿರೇಬನ್ನಿಗೋಳ ಕ್ರಾಸ್ ನಲ್ಲಿ ದಿನಾಂಕ ೧೩-೦೩-೨೦೨೨ ರಂದು ನಡೆದ ಡಾ| ಎ.ಪಿ.ಜೆ.ಅಬ್ದುಲ್ ಕಲಾಂ ಶಾಲಾ ಕಟ್ಟಡ ಹಾಗೂ ಅಟಲ್ ಜೀ ಸಭಾ ಭವನ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಎಪಿಜೆ ಅಬ್ದುಲ್ ಕಲಾಂ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ಮುಂದೆ, ಇಂಜಿನಿಯರಿಂಗ್, ಡಾಕ್ಟರ್, ಶಿಕ್ಷಕರು, ವಿವಿಧಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ಈ ಒಂದು ಸಂಸ್ಥೆಗೆ ಹಾಗೂ ಗ್ರಾಮಕ್ಕೆ ಗೌರವ ತರುತ್ತಾರೆ. ಹಿರೇಬನ್ನಿಗೋಳ ಗ್ರಾಮ ವಿಶ್ವ ಮಟ್ಟದಲ್ಲಿ ಪರಿಚಯವಾಗುತ್ತದೆ. ಸಮಾಜ ಸೇವಕ ರೇಹಮಾನಸಾಬ ದೊಡ್ಡಮನಿ ಅವರು ದೇಶ ಕಂಡ ಇಬ್ಬರು ಅಪ್ರತಿಮ ಮಹಾನ ವ್ಯಕ್ತಿಗಳ ಹೆಸರಲ್ಲಿ ಶಾಲೆ, ಸಭಾ ಭವನ ಕಟ್ಟಿಸಿರುವುದು ಮಾದರಿ ಕಾರ್ಯಕವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ, ಮಾಜಿ ಶಾಸಕರಾದ ದೊಡ್ಡನಗೌಡ ಹೆಚ್.ಪಾಟೀಲ್, ಹಸನಸಾಬ ದೋಟಿಹಾಳ ಮಾತನಾಡಿದರು. ಕುಷ್ಟಗಿ ಮದ್ದಾನಿ ಹಿರೇಮಠದ ಕರಿಬಸವ ಶಿವಾಚಾರ್ಯ ಸ್ವಾಮೀಜಿ, ಯಲಬುರ್ಗಾದ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಎಂ.ಗುಡದೂರು ನೀಲಕಂಠಯ್ಯ ತಾತನವರು, ಹನುಮಸಾಗರ/ಇಳಕಲ್ ಫೈಸಲ್ ಪಾಷಾ ಹಜರತ್ ಸೈಯದ್ ಶಾ ಅಬ್ದುಲ್ ಖಾದ್ರಿ ವೇದಿಕೆ ಸಾನ್ನಿಧ್ಯ ವಹಿಸಿದ್ದರು.
ಕಾರ್ಯಕ್ರಮ ಸಂಯೋಜಕರಾದ ರೇಹಮಾನಸಾಬ ದೊಡ್ಡಮನಿ ಅವರು ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ೫ ಜೋಡಿ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಮಹೇಶ, ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ, ಸಿಪಿಐ ನಿಂಗಪ್ಪ ಎನ್.ಆರ್, ಪುರಸಭೆ ಅಧ್ಯಕ್ಷ ಗಂಗಾಧರಯ್ಯ ಕೆ.ಹಿರೇಮಠ ಸೇರಿದಂತೆ ಇನ್ನಿತರರಿದ್ದರು..!!