ಪುರಾಣ ಪ್ರವಚನ ಜೊತೆಗೆ ಸಂವಿಧಾನ ಪಠಣವಾಗಲಿ : ಸಿಪಿಐ ನಿಂಗಪ್ಪ ಎನ್.ಆರ್

 

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ (ಕುಷ್ಟಗಿ) : ಸಮಾಜದಲ್ಲಿ ಸಮಾನತೆ ಮೂಡಬೇಕಾದರೆ ದೇವರುಗಳ ಹೆಸರಿನಲ್ಲಿ ಪುರಾಣ ಪ್ರವಚನ ನಡೆಸಿದಂತೆ ಎಲ್ಲಾ ಹಳ್ಳಿಗಳಲ್ಲಿ ಭಾರತದ ಸಂವಿಧಾನ ಪಠಣ ಮಾಡಬೇಕು ಎಂದು ಕುಷ್ಟಗಿ ಸಿಪಿಐ ನಿಂಗಪ್ಪ ಎನ್.ಆರ್. ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲೆಯ ಕುಷ್ಟಗಿ ತಾಲೂಕು ಕೇಸೂರು-ದೋಟಿಹಾಳ ಅವಳಿ ಗ್ರಾಮದಲ್ಲಿ ದಿನಾಂಕ : 18-04-2022 ರಂದು ಜೈ ಭೀಮ ಕ್ರಾಂತಿ ಯುವ ಸೇನೆ ಸಮಿತಿ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ| ಬಿ.ಆರ್.ಅಂಬೇಡ್ಕರ್ ಅವರ 131ನೇ ಜನ್ಮದಿನ ಭೀಮೋತ್ಸವ ಹಾಗೂ ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನರಾಂ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೆಲವರಿಗೆ ಸಮಾನತೆ ಬಗ್ಗೆ ಪರಿಕಲ್ಪನೆ ಇಲ್ಲ. ಉದಾಹರಣೆಗೆ ಜಿಲ್ಲೆಯ ಮಿಯ್ಯಾಪೂರ ಗ್ರಮದಲ್ಲಿ ಅಸ್ಪೃಶ್ಯತೆ ಆಚರಣೆಯಾಗಿರುವುದನ್ನು ಸ್ಮರಿಸಿದರು.
ದೇವರು, ಜಾತಿ ದೇವರು ಹೆಸರಿನಲ್ಲಿ ಪ್ರವಚನ ಜೊತೆಗೆ ಇನ್ನೊಂದೆ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗದ ಸ್ತಂಭವಾದ ಸಂವಿಧಾನದ ಪುಟಗಳ ಪ್ರವಚನಗಳನ್ನು ಹಳ್ಳಿಗಳಲ್ಲಿ ಮಾಡಿದರೆ ಮಾತ್ರ ದೇಶದ ದಲಿತರು, ಹಿಂದುಳಿದವರ ಬದುಕು ಹಸನವಾಗುತ್ತದೆ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದಂತೆ ಮೊದಲು ಶಿಕ್ಷಣ ಪಡೆಯಬೇಕು ನಂತರ ಸಂಘಟನೆ ಹೋರಾಟ ಮಾಡಬೇಕು. ಹಿಂದುಳಿದ, ದಲಿತ ವರ್ಗದವರು ಮೊದಲು ಶಿಕ್ಷಣವಂತರಾದರೆ ಮಾತ್ರ ಹಕ್ಕುಗಳನ್ನು ಪಡೆಯಬಹುದು ಎಂಬುದನ್ನು ಅರಿತುಕೊಳ್ಳಬೇಕು ಎಂದು ಹೇಳಿದರು. ಕುಷ್ಟಗಿ ಪುರಸಭೆ ಸದಸ್ಯ ವಸಂತ ಮೇಲಿನಮನಿ, ಕೇಸೂರು-ದೋಟಿಹಾಳ ಗ್ರಾಮ ಪಂಚಾಯಿತಿ ಸದಸ್ಯರು, ಜೈಭೀಮ ಕ್ರಾಂತಿ ಯುವ ಸೇನೆ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು..!!