ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಎಲ್ಲವೂ ಮಣ್ಣಿನಿಂದಲೇ ನಿರ್ಮಾಣ..! ಈ ಜಗತ್ತಿನಲ್ಲಿ ಮಣ್ಣು ಬಿಟ್ಟರೇ ಇದಕ್ಕೆ ಯಾವುದೇ ಸರಿ ಸಮಾನವಾದ ವಸ್ತು ಮತ್ತೊಂದು ಇಲ್ಲ…!! ಇಂತಹ ಪವಿತ್ರ ಮಣ್ಣಿನ ಋಣ ತೀರಿಸಬೇಕಾಗಿದೆ ಎಂದು ಕೊಪ್ಪಳ ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಅಭಿಪ್ರಾಯ ವ್ಯಕ್ತಪಡಿಸಿದರು..!
ಜಿಲ್ಲೆಯ ಕುಷ್ಟಗಿ ತಾಲೂಕಿನ ಪಟ್ಟಲಚಿಂತಿ ಗ್ರಾಮದ ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವದ ಹಿನ್ನಲೆಯಲ್ಲಿ ತಯಾರಿಸಿದ ನೂತನ ಮಹಾ ರಥೋತ್ಸವಕ್ಕೆ ಚಾಲನೆ ನೀಡಿದ ಬಳಿಕ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಗಳು ಮಾತನಾಡಿದರು. ಮನುಷ್ಯ ಜನ್ಮ ದೊಡ್ಡದು, ಬದುಕು ಕಳೆಯಲಿಕ್ಕೆ ದೇವರು ಕೊಟ್ಟ ಭೂಮಿಯಲ್ಲಿ ನಿಸರ್ಗದ ಒಳಿತಿಗಾಗಿ ನಾವೆಲ್ಲರೂ ಬದುಕಬೇಕಾಗಿದೆ. ಭೂಮಿಯ ಕೃಪಾ ದೊಡ್ಡದು, ಎಲ್ಲವನ್ನೂ ಧಾರೆ ಎರೆಯುವ ಭೂಮಿಗೆ ನಾವೇನು ನೀಡಿದ್ದೇವೆ..? ಎಂಬುದನ್ನ ನಾವೆಲ್ಲರೂ ಮನಗಾಣಬೇಕಿದೆ ಎಂದರು. ಮನುಷ್ಯನ ಚಿಂತೆಗೆ ಕೊನೆಯಿಲ್ಲ. ನಾವೆಲ್ಲಾ ಉತ್ಸಾಹಿಗಳಾಗಿ ಬದುಕ ಬೇಕಾಗಿದೆ. ಎಲ್ಲ ಸಮಸ್ಯೆಗಳಿಗೆ ಆತ್ಮಹತ್ಯೆ ಒಂದೇ ದಾರಿ ಅಲ್ಲ. ನಿರಂತರ ಉತ್ಸಾಹಿಗಳಾಗಿ ಸಮಸ್ಯೆಗಳನ್ನು ಎದುರಿಸುವ ಸಾಹಸಕ್ಕೆ ಮುಂದಾಗಬೇಕಾಗಿದೆ ಎಂದು ಗವಿಶ್ರೀಗಳು ಆಶೀರ್ವದಿಸಿದರು. ಇದಕ್ಕೂ ಮೊದಲು ರಥ ಶಿಲ್ಪಿಗಳು ಸೇರಿದಂತೆ ಪಟ್ಟಲಚಿಂತಿ ಗ್ರಾಮಸ್ಥರಿಗೆ, ಸರಕಾರಿ, ಅರೆ ಸರಕಾರಿ ನೌಕರರಿಗೆ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಸನ್ಮಾನಿಸಿ ಸತ್ಕರಿಸಿದರು. ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರು ಮಾತನಾಡಿ, ತ್ರೈತಾಯುಗದಲ್ಲಿ ಜರುಗಿದೆ ಎನ್ನಲಾದ ರಾಮಾಯಣದ ಇತಿಹಾಸದಲ್ಲಿ ಹನುಮನ ಭಕ್ತಿ ಅಪಾರವಾದದ್ದು , ರಾಮನ ಭಂಟ ಹನುಮಂತನ ಭಕ್ತಿ ಕಾರ್ಯಕ್ಕಾಗಿಯೇ ಪ್ರಸಿದ್ಧಿಯಾಗಿದ್ದು ಅಂತಹ ಮಹಾನ್ ದೈವೀ ಸ್ವರೂಪಿ ಅಂಜನಿ ಪುತ್ರನನ್ನು ಇಂದು ನೆನೆಯಬೇಕಾಗಿದೆ ಎಂದು ಹೇಳಿದರು. ಜಿಪಂ ಮಾಜಿ ಸದಸ್ಯರಾದ ಸೋಮಣ್ಣ ಇಂಗಳದಾಳ, ನೇಮಣ್ಣ ಮೇಲಸಕ್ರಿ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು. ಕುಮಾರಿ ಅರ್ಚನಾ ಪ್ರಾರ್ಥಿಸಿದಳು. ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ಕನಕಪ್ಪ ಗುಡೂರು ಕಾರ್ಯಕ್ರಮ ನಿರೂಪಿಸಿದರು. ಆರೋಗ್ಯ ಇಲಾಖೆ ಸಿಬ್ಬಂದಿ ಶರಣಪ್ಪ ರಾಜೂರು ವಂದಿಸಿದರು..!!