ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್|
ಕೊಪ್ಪಳ (ಕುಷ್ಟಗಿ) : ಧ್ವನಿವರ್ದಕ/ಶಬ್ಧ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಧ್ವನಿವರ್ಧಕ ಬಳಸುವವರು ಇದೇ ಮೇ.25 ರೊಳಗೆ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ..!
ಜಿಲ್ಲೆಯ ಕುಷ್ಟಗಿ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ದಿನಾಂಕ 19-05-2022 ರಂದು ತಹಸೀಲ್ದಾರ್ ಎಂ.ಸಿದ್ಧೇಶ ಹಾಗೂ ಸಿಪಿಐ ನಿಂಗಪ್ಪ ಎನ್.ಆರ್, ಅವರ ಉಪಸ್ಥಿತಿಯಲ್ಲಿ ಸರ್ವ ಸಮುದಾಯಗಳ ಮುಖಂಡರೊಂದಿಗೆ ನಡೆಸಿದ ಸಭೆಯಲ್ಲಿ ಈ ಕುರಿತು ತಿಳಿಸಲಾಗಿದೆ. ಎಲ್ಲ ಧಾರ್ಮಿಕ ಕೇಂದ್ರಗಳು ಹಾಗೂ ಸಾರ್ವಜನಿಕ ಸಭೆ ಸಮಾರಂಭಗಳಲ್ಲೂ ಧ್ವನಿವರ್ಧಕ ಬಳಸುವುದಕ್ಕೆ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಹಾಗಾಗಿ ಯಾವ ಸಮುದಾಯದವರೇ ಆಗಿರಲಿ ಮೈಕ್ ಬಳಸಲು ಉದ್ಧೇಶಿಸಿರುವವರು ದಿನಾಂಕ 25-05-2022 ರೊಳಗೆ ಸರ್ಕಾರ ರಚಿಸಿರುವ ಕಮಿಟಿಯಲ್ಲಿ ತಹಸೀಲ್ದಾರ್, ವಾಯ್ಸ್ ಪೊಲಿಷನ್ ಆಫಿಸರ್ (ಶಬ್ಧ ಮಾಲಿನ್ಯ ನಿಯಂತ್ರಣ) ಹಾಗೂ ಡಿವೈಎಸ್ಪಿ ಅವರಿಗೆ ಕಡ್ಡಾಯವಾಗಿ ಅರ್ಜಿ ಸಲ್ಲಿಸಬೇಕು. ನಿಗದಿತ ದಿನಾಂಕ ಹೊರತುಪಡಿಸಿ ಬಂದ ಅರ್ಜಿಗಳನ್ನು ಅನುರ್ಜಿತಗೊಳಿಸಲಾಗುವುದು ಎಂದು ಸಭೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಬಳಿಕ ಪ್ರತಿ ಅರ್ಜಿದಾರರಿಗೆ ಪ್ರತ್ಯೇಕ ದಿನ ನಿಗದಿಪಡಿಸಿ ದಾಖಲೆಗಳನ್ನು ಪರಿಶೀಲಿಸಿ ನಂತರ ಮೈಕ್ ಅಳವಡಿಕೆಗೆ ಸರ್ಕಾರದ ನಿಯಮದಂತೆ ಇಂಡಸ್ಟ್ರೀಯಲ್ ಏರಿಯಾ, ಆಸ್ಪತ್ರೆ, ರೆಸಿಡೆನ್ಸಿಯಲ್ ಏರಿಯಾಗಳಲ್ಲಿ ಎಷ್ಟು ಪ್ರಮಾಣದಲ್ಲಿ ಧ್ವನಿವರ್ಧಕದ ಶಬ್ಧ ಇರಬೇಕು ಎಂಬುದರ ಗೈಡ್ ಲೈನ್ ಕಮೀಟಿಯಿಂದ ನೀಡಲಾಗುತ್ತದೆ. ಅರ್ಜಿ ಸಲ್ಲಿಸಿ ಪರವಾನಿಗೆ ಪಡೆಯದೆ ನಿಯಮ ಉಲ್ಲಂಘಿಸಿ ಮೈಕ್ ಅಳವಡಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರ ಆದೇಶಿಸಿದೆ ಎಂದು ಸಭೆಯಲ್ಲಿ ತಿಳಿಸಲಾಗಿದೆ. ಪಿಎಸ್ ಐ ತಿಮ್ಮಣ್ಣ ನಾಯಕ ಸೇರಿದಂತೆ ಕುಷ್ಟಗಿ ಪಟ್ಟಣದ ಎಲ್ಲಾ ಸಮುದಾಯದ ಮುಖಂಡರು ಸಭೆಯಲ್ಲಿ ಹಾಜರಿದ್ದರು..!!