‘ಅಭಿಷೇಕ ಮರಿಯಪ್ಪ ಗ್ವಾತಗಿ’ ಕೊಪ್ಪಳ ಜಿಲ್ಲೆಗೆ ಪ್ರಥಮ ಸ್ಥಾನ

 

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ತುಮರಿಕೊಪ್ಪ ಗ್ರಾಮದ ಅಭಿಷೇಕ ಮರಿಯಪ್ಪ ಗ್ವಾತಗಿ ಎಂಬ ವಿದ್ಯಾರ್ಥಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಕ್ಕೆ 624 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಮಟ್ಟದಲ್ಲಿಯೇ ಅತ್ಯುತ್ತಮ ಸಾಧನೆ ಮಾಡಿರುವುದು ಕೊಪ್ಪಳ ಜಿಲ್ಲೆಗೆ ಹೆಮ್ಮೆಯ ಸಂಗತಿ..!

ಕನ್ನಡ ವಿಷಯಕ್ಕೆ 125 ಅಂಕಗಳಿಗೆ 125, ಇಂಗ್ಲಿಷ್ 100 ಅಂಕಗಳಿಗೆ 100 ಅಂಕಗಳು, ಸಮಾಜ ವಿಜ್ಞಾನ 100 ಅಂಕಗಳಿಗೆ 100 ಅಂಕಗಳು, ಹಿಂದಿ 100 ಅಂಕಗಳಿಗೆ 100 ಅಂಕಗಳು, ಗಣಿತ 100 ಅಂಕಗಳಿಗೆ 100 ಅಂಕಗಳು ಹಾಗೂ ವಿಜ್ಞಾನ ವಿಷಯಕ್ಕೆ ಮಾತ್ರ 100 ಅಂಕಗಳಿಗೆ 99 ಅಂಕಗಳನ್ನು ಪಡೆಯುವ ಮೂಲಕ (ಶೇ.99.84) ಅಭಿಷೇಕ ವಿಶಿಷ್ಟ ಸಾಧನೆಗೈದಿದ್ದಾನೆ. ಇತನ ಈ ವಿಶಿಷ್ಟ ಸಾಧನೆಯಿಂದ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಮೂಡಿಗೇರಿಸಿಕೊಳ್ಳುವುದರ ಜೊತೆಗೆ ಕೊಪ್ಪಳ ಜಿಲ್ಲೆಯ ಕೀರ್ತಿಯನ್ನು ಮತ್ತಷ್ಟು ಉತ್ತುಂಗಕ್ಕೇರಿಸಿದ್ದಾನೆ. ಅದರ ಅಷ್ಟೇ, ಅಭ್ಯಾಸ ಮಾಡಿದ ಕುಷ್ಟಗಿ ತಾಲೂಕಿನ ಕಾಟಾಪೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಹೆಮ್ಮೆಯ ಪುತ್ರನಾಗಿ ಹೊರಹೊಮ್ಮಿದ್ದಾನೆ. ವಸತಿ ಶಾಲೆಯ ಪ್ರಾಚಾರ್ಯ ಸೇರಿದಂತೆ ಶಿಕ್ಷಕ, ಸಿಬ್ಬಂದಿ ವರ್ಗವನ್ನು ಸ್ಮರಿಸಿಕೊಳ್ಳುವುದನ್ನು ಮಾತ್ರ ಅಭಿಷೇಕ ಮರೆಯುವುದಿಲ್ಲ. ನಿರಂತರ ಅಭ್ಯಾಸ, ಅಂದಿನ ಓದು, ಅಂದೇ ಮುಗಿಸುವ ಪರಿಪಾಠ ಅತ್ಯುತ್ತಮ ಯಶಸ್ವಿಗೆ ಕಾರಣವಾಗಿದೆ. ನನ್ನ ಈ ವಿಶೇಷ ಸಾಧನೆಗೆ ಶಿಕ್ಷಕರು ಸೇರಿದಂತೆ ತಂದೆ ತಾಯಿ ಪ್ರಮುಖ ಕಾರಣರಾಗಿದ್ದಾರೆ. ನನ್ನ ಇಷ್ಟದಂತೆ ಸಾಧನೆ ಪೂರೈಸಿದ್ದಾಗಿದೆ. ದೇಶದ ಅತ್ಯುನ್ನತ ಹುದ್ದೆಗಳಲ್ಲೊಂದಾದ ಐಪಿಎಸ್ ಪಾಸಾಗುವ ಕನಸು ನನ್ನದಾಗಿದೆ. ಮೂಲ ಗುರಿ ಮುಟ್ಟುವ ತನಕ ಸತತ ಪರಿಶ್ರಮ ಪಡುವುದಾಗಿ ಕೃಷಿ ಪ್ರಿಯ ಪತ್ರಿಕೆಗೆ ಜಿಲ್ಲೆಯ ಹೆಮ್ಮೆಯ ಕೀರ್ತಿ ಪುತ್ರ ಅಭಿಷೇಕ್ ಮರಿಯಪ್ಪ ಗ್ವಾತಗಿ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾನೆ.

ಕುಟುಂಬದಲ್ಲಿ ಸಂಭ್ರಮ : ಮಗನ ವಿಶಿಷ್ಟವಾದ ಸಾಧನೆಗೆ ಇಡೀ ಕುಟುಂಬವೇ ಸಂಭ್ರಮದಲ್ಲಿದೆ. ಮಗನ ಸಾಧನೆ ಕಂಡು ಹೆಮ್ಮೆ ವ್ಯಕ್ತಪಡಿಸುವ ಕುಟುಂಬ ವರ್ಗದವರು ಸೇರಿದಂತೆ ಆಪ್ತ ಮಿತ್ರರ ಶುಭ ಸಂದೇಶಗಳಿಂದ ತಂದೆ ಮರಿಯಪ್ಪ ಗ್ವಾತಗಿಯವರ ಆನಂದದ ಕೊಡಿಯೇ ಹರಿದು ಬಂದಿತು..!

ಅಭಿಷೇಕ್ ಕನಸು : ಐಪಿಎಸ್ ಅಧಿಕಾರಿಗಳಾಗಿದ್ದ ರವಿ ಡಿ ಚೆನ್ನಣ್ಣನವರ ಹಾಗೂ ಅಣ್ಣಾಮಲೈ ತರಹ ಆಗಬೇಕೆಂಬುವುದು ಅಭಿಷೇಕನ ಕನಸು. ವಿದ್ಯಾರ್ಥಿಯ ಕನಸು ನನಸಾಗಲಿ ಎಂಬದು ಪತ್ರಿಕೆ ಹಾರೈಕೆ ಕೂಡಾ ಹೌದಾಗಿದೆ.

“ವಿಜ್ಞಾನ ವಿಷಯದಲ್ಲಿ ಕೇವಲ ಒಂದು ಅಂಕ ಕಡಿಮೆ ಪಡೆದಿರುವ ಕಾರಣಕ್ಕೆ ಅಭಿಷೇಕ ಮರಿಯಪ್ಪ ಗ್ವಾತಗಿ ಎಂಬ ವಿದ್ಯಾರ್ಥಿಗೆ ಹಾಗೂ ಕೊಪ್ಪಳ ಜಿಲ್ಲೆಗೆ ‘ರಾಜ್ಯಕ್ಕೆ ಪ್ರಥಮ ಸ್ಥಾನ’ ಕೈ ತಪ್ಪಿ ಹೋಗಿದೆ”..!

# ಮಗನ ಫಲಿತಾಂಶ ಸಾಕಷ್ಟು ಖುಷಿ ತಂದು ಕೊಟ್ಟಿದೆ. ಮಗನ ಸಾಧನೆಯಿಂದ ನಮ್ಮ ಕುಟುಂಬದ ಹೆಸರು ಮತ್ತಷ್ಟು ಇಮ್ಮಡಿಯಾಗಿತು. ಆತನ ಸಾಧನೆಗೆ ಕಾರಣರಾದ ಶಿಕ್ಷಕ ವೃಂದದ ಬಗ್ಗೆ ಹೆಮ್ಮೆ ಇದೆ. ಎಲ್ಲರಿಗೂ ಚಿರ ಋಣಿ.

# # ಮರಿಯಪ್ಪ ಮಹಾಲಿಂಗಪ್ಪ ಗ್ವಾತಗಿ,
ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಕೆಪಿಸಿಸಿ ಪರಿಶಿಷ್ಟ ಪಂಗಡ ವಿಭಾಗದ ಪ್ರಧಾನ ಕಾರ್ಯದರ್ಶಿ ಬೆಂಗಳೂರು. (ತುಮರಿಕೊಪ್ಪ)

# ಬಾಲ್ಯದಲ್ಲಿಯೇ ಬಹಳಷ್ಟು ಚೂಟಿಯಾಗಿದ್ದ ಮಗ ಇಷ್ಟೊಂದು ಅತ್ಯುತ್ತಮ ಸಾಧನೆ ಮಾಡುತ್ತಾನೆ ಎಂದು ಅಂದುಕೊಂಡಿದ್ದಿಲ್ಲ. ಆತನ ತಾಯಿಯಾಗಿದ್ದು ನನ್ನ ಭಾಗ್ಯವೇ ಸರಿ.

# # ಮಂಜುಳಾ ಮರಿಯಪ್ಪ ಗ್ವಾತಗಿ,
ತಾಲೂಕಾ ಪಂಚಾಯಿತಿ, ಮಾಜಿ ಸದಸ್ಯರು, ತುಮರಿಕೊಪ್ಪ.