ಎಲ್ಲರ ಬಾಯಿಯಲ್ಲೂ ‘ರೋಹಿಣಿ’

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಕಡೆಗೂ ಅಂತು ಇಂತೂ ರೋಹಿಣಿ ಮಳೆ ಸುರಿಯಿತು. ಮಳೆ ಕೂಡಿಕೊಂಡು 10 ದಿನಗಳಾಗಿದ್ದರೂ ಕೂಡಾ ಇಲ್ಲಿಯವರೆಗೂ ಬೀಜ ಮಳೆ ರೋಹಿಣಿ ಆಗಿದ್ದಿಲ್ಲ. ರೈತರ ಬಾಯಿಯಲ್ಲಿ ಮಾತ್ರ ಕೈಕೊಟ್ಟಿದ್ದ ರೋಹಿಣಿ ಮಳೆಯ ಮಾತುಗಳೇ ಪ್ರಮುಖವಾಗಿದ್ದವು. ಈ ವರ್ಷ ರೋಹಿಣಿ ಮಳೆ ಏತಕ್ಕೆ ಆಗುತ್ತಿಲ್ಲ ಎಂಬ ಚಿಂತೆ ನಮ್ಮ ರೈತರನ್ನ ಆವರಿಸಿಕೊಂಡಿತ್ತು. ಆದರೆ,  02-06-2022 ರಂದು ರಾತ್ರಿ ಅಲ್ಪ ಮಟ್ಟಿಗಾದರೂ ಸುರಿದ ‘ರೋಹಿಣಿ’ ವಸುಂಧರೆಯ ಜೊತೆಗೆ ಅನ್ನದಾತರ ಮನ ತಣಿಸಿತು..!

ಸುರಿದ ಕೃತಿಕಾ ಮಳೆಗೆ ಅಲ್ಪ ಭಾಗ ಹೆಸರು ಬಿತ್ತನೆಯಾಗಿತ್ತು. ಇನ್ನೂ ಕೆಲ ಕಡೆಗಳಲ್ಲಿ ಭೂಮಿ ಹದಗೊಳಿಸುವ ಕಾರ್ಯ ಜೊರಾಗಿಯೇ ನಡೆದಿತ್ತು. ರೋಹಿಣಿ ಮಳೆಯ ಉತ್ತಮ ತಥಿಗಾಗಿ ಬಹುತೇಕ ರೈತರು ಎದುರು ನೋಡುತ್ತಿದ್ದರು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೊನೆಯ ಪಾದದಲ್ಲಿಯಾದರೂ ಸುರಿಯಲು ಆರಂಭಿಸಿರುವ ರೋಹಿಣಿ ಮಳೆಯ ಆಗಮನದ ಜೊತೆಗೆ ಗಾಳಿ, ಸಿಡಿಲು ಹಾಗೂ ಗುಡುಗು ಅರ್ಭಟ ಜೋರಾಗಿಯೇ ಇದೆ. ಮಳೆಯ ಬಾಕಿ ಉಳಿದುಕೊಂಡಿರುವ ಅಲ್ಪ ದಿನಗಳಾದರೂ ಪರವಾಗಿಲ್ಲ ಬೀತ್ತನೆಗೆ ಶ್ರೇಷ್ಠ ತಥಿ (ಸಮಯ) ಸಿಕ್ಕಿತಲ್ಲಾ ಎಂಬ ಆಶಾ ಭಾವನೆ ನಮ್ಮ ರೈತರಲ್ಲಿ ಮನೆ ಮಾಡಿಕೊಂಡಿದೆ. ಈ ವರ್ಷದ ಮುಂಗಾರು ಹಂಗಾಮು ರೈತರಿಗೆ ಹರ್ಷ ಉಂಟುಮಾಡಲಿ, ಮುಂಗಾರು ಹನಿಗಳ ಪ್ರಭಾವದಿಂದ ಇಳುವರಿ ಪ್ರತಿ ವರ್ಷಕ್ಕಿಂತಲೂ ಹುಲುಸಾಗಲಿ ಎಂಬುದು ‘ಕೃಷಿ ಪ್ರಿಯ’ ಪತ್ರಿಕೆಯ ಆಶಯ..!!