ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಹೈದ್ರಾಬಾದ್ ಕರ್ನಾಟಕದ (ಕಲ್ಯಾಣ ಕರ್ನಾಟಕ) ಗಡಿ ಪ್ರದೇಶವಾಗಿರುವ ‘ಹನುಮನಾಳ’ ಕಂದಾಯ ಹೋಬಳಿ ಪ್ರದೇಶವನ್ನು ಒಗ್ಗೂಡಿಸಿ ತಾಲೂಕಾ ಕೇಂದ್ರವನ್ನಾಗಿಸಬೇಕು ಎಂಬ ಕೂಗು ಈ ಭಾಗದಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ..!
ಮುಂಬೈ ಕರ್ನಾಟಕದ ಬಾಗಲಕೋಟೆ ಹಾಗೂ ಗದಗ ಜಿಲ್ಲೆಗಳ ಗಡಿ ಮಧ್ಯದಲ್ಲಿ ಸಿಲುಕಿಕೊಂಡಿರುವ ಹನುಮನಾಳ ಕಂದಾಯ ಹೋಬಳಿ ಪ್ರದೇಶವು ಕುಷ್ಟಗಿ ತಾಲೂಕಾ ಕೇಂದ್ರದಿಂದ ಸುಮಾರು 60 ಕಿ.ಮೀಗಳಷ್ಟು ದೂರದಲ್ಲಿದೆ. ಈ ಹೋಬಳಿ ಪ್ರದೇಶದ ಗ್ರಾಮಸ್ಥರಿಗೆ ತಾಲೂಕಾ ಕೇಂದ್ರಕ್ಕೆ ಅಲೆದಾಡುವುದೇ ದಿನ ನಿತ್ಯದ ಕೆಲಸವಾಗಿದೆ. ಸುಮಾರು 50 ಗ್ರಾಮಗಳನ್ನು ಒಳಗೊಂಡ ಕಂದಾಯ ಹೋಬಳಿ ಕೇಂದ್ರ ಸ್ಥಾನ ಹನುಮನಾಳನ್ನು ಕೇಂದ್ರವಾಗಿಸಿಕೊಂಡು ನೂತನ ತಾಲೂಕಾ ಎಂದು ಘೋಷಿಸಬೇಕು ಎಂಬ ಹೋರಾಟದ ಕಿಚ್ಚು ಈ ಭಾಗದಲ್ಲಿ ಮತ್ತೆ ಆರಂಭವಾಗಿದೆ.
ಹನುಮನಾಳಕ್ಕೆ ಸ್ವಾತಂತ್ರ್ಯದ ಇತಿಹಾಸ : ಹನುಮನಾಳ ಹೋಬಳಿ ಕೇಂದ್ರ ಸ್ಥಾನವು ತನ್ನದೇ ಆದ ಇತಿಹಾಸ ಹೊಂದಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಹನುಮನಾಳ ಪಟ್ಟಣವು ಸ್ವಾತಂತ್ರ್ಯ ಸೇನಾನಿಗಳ ತರಬೇತಿ ಕೇಂದ್ರವಾಗಿತ್ತು. ಆಗಿನ ಕಾಲದಲ್ಲಿಯೇ ಹನುಮನಾಳ ಸ್ವಾತಂತ್ರ್ಯ ಸೇನಾನಿಗಳ ಬೀಡಾಗಿತ್ತು ಕೂಡಾ. ದೇಶದ ಸ್ವಾತಂತ್ರ್ಯಕ್ಕಾಗಿ ಅಲ್ಲದೆ, ಹೈದರಾಬಾದ್ ಕರ್ನಾಟಕ ನಿಜಾಮ ಶಾಹಿಗಳ ವಿರುದ್ಧ ತೊಡೆತಟ್ಟಿ ಸಾಕಷ್ಟು ಜನ ವೀರಮರಣವನ್ನಪ್ಪಿದ ತಾಯಿನಾಡು ಹನುಮನಾಳ ಕೇಂದ್ರ ಪ್ರದೇಶ. ದೇಶದ ಸ್ವಾತಂತ್ರ್ಯ ಹಾಗೂ ಹೈದ್ರಾಬಾದ್ ಕರ್ನಾಟಕ ಪ್ರದೇಶದ ವಿಮೋಚನೆಗಾಗಿ ಈ ಭಾಗದ ನೂರಾರು ಜನ ಸ್ವಾತಂತ್ರ್ಯ ಸೇನಾನಿಗಳನ್ನು ನೀಡಿದ ಕೀರ್ತಿ ಇಂದಿಗೂ ಅಜರಾಮರ. ಹೈದ್ರಾಬಾದ್ ನಿಜಾಮರು ಕರ ವಸೂಲಿಗಾಗಿ ಹನುಮನಾಳನ್ನು ಸುಂಕ (ಕರ) ವಸೂಲಿ ಕೇಂದ್ರವಾಗಿಸಿದ್ದರು. ಸ್ವಾತಂತ್ರ್ಯ ಬಳಿಕ ಹನುಮನಾಳದಲ್ಲಿ ಉಪ ತಹಸೀಲ್ದಾರ ಕಚೇರಿ ಇಲ್ಲಿಯವರೆಗೂ ಜಾರಿಯಲ್ಲಿದೆ. ಆಡಳಿತ ವಿಂಗಡಿಕರಣ ಅಥವಾ ಗಡಿ ಪ್ರದೇಶದ ಅಭಿವೃದ್ಧಿ ಹಿತದೃಷ್ಟಿಯಿಂದ ಹನುಮನಾಳನ್ನು ತಾಲೂಕಾ ಕೇಂದ್ರವಾಗಬೇಕೆಂಬ ಈ ಭಾಗದವರ ಬಹು ವರ್ಷಗಳ ಬೇಡಿಕೆ ಈಡೇರಿಕೆಯಾಗಬೇಕಿದೆ. ಈ ಭಾಗದವರು ಈಗಾಗಲೇ ಸಾಕಷ್ಟು ಹೋರಾಟ ಕೈಗೊಳ್ಳುವುದಲ್ಲದೆ, ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಈ ಭಾಗದ ಗ್ರಾಮಸ್ಥರು ಹನುಮನಾಳ ತಾಲೂಕಾ ಕೇಂದ್ರ ರಚನೆಗೆ ಈ ಹಿಂದೆ ಮನವಿ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ..!!
ರಾಜ್ಯದಲ್ಲಿಯೇ ಅತ್ಯಂತ ಸಣ್ಣ ತಾಲೂಕಾಗಲಿ : ಜಿಲ್ಲಾ ಕೇಂದ್ರದಿಂದ 110 ಕಿ.ಮೀ ಹಾಗೂ ತಾಲೂಕಾ ಕೇಂದ್ರದಿಂದ 60 ಕಿ.ಮೀ ದೂರದ ಗ್ರಾಮಗಳನ್ನು ಹೊಂದಿರುವ ಭೌಗೋಳಿಕವಾಗಿ ‘ದ್ವೀಪದಂತಿರುವ’ ಹನುಮನಾಳ ಕಂದಾಯ ಹೋಬಳಿ ಪ್ರದೇಶ ರಾಜ್ಯದಲ್ಲಿಯೇ ಅತ್ಯಂತ ಸಣ್ಣ ತಾಲೂಕಾ ಕೇಂದ್ರವಾಗಬೇಕು ಎಂಬ ಮಹದಾಸೆ ಈ ಭಾಗದವರದ್ದಾಗಿದೆ. ಎಲ್ಲ ರೀತಿಯಲ್ಲಿ ತಾಲೂಕಾ ಕೇಂದ್ರಕ್ಕೆ ಯೋಗ್ಯವಾಗಿರುವ ಹನುಮನಾಳ ತಾಲೂಕಾ ಬೇಡಿಕೆಗೆ ಚುನಾಯಿತ ಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳ ಬೆಂಬಲದ ಅವಶ್ಯಕತೆ ಇದೆ..!!