ಸ್ಥಳದಲ್ಲಿಯೇ ಸಮಸ್ಯೆ ಪರಿಹಾರವಾಗಬೇಕು : ಬಯ್ಯಾಪೂರು

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಸಾರ್ವಜನಿಕರ ಸಮಸ್ಯೆಗಳು ಸ್ಥಳದಲ್ಲಿಯೇ ಬಗೆಹರಿಯಬೇಕು ಎಂಬುದು ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ’ ಎಂಬ ಕಾರ್ಯಕ್ರಮದ ಮುಖ್ಯ ಉದ್ಧೇಶವಾಗಿದೆ ಎಂದು ಅಮರೇಗೌಡ ಪಾಟೀಲ ಬಯ್ಯಾಪೂರು ಅಭಿಪ್ರಾಯವ್ಯಕ್ತಪಡಿಸಿದರು.

‌ಜಿಲ್ಲೆಯ ಕುಷ್ಟಗಿ ತಾಲೂಕಿನ ತುಗ್ಗಲಡೋಣಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಹಾಗೂ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸ್ಥಳೀಯ ಶಿಕ್ಷಕರ ನೇಮಕ ಸಮಸ್ಯೆಗಳಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ ಕಿಶೋರ್ ಮಾತನಾಡಿ, ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಳ್ಳುವಂತೆ ಹಾಗೂ ಅತಿಥಿ ಶಿಕ್ಷಕರನ್ನು ನೇಮಕಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಮೀನುಗಳಿಗೆ 24 ಗಂಟೆಗಳ ನಿರಂತರ ತ್ರೀ ಪೇಸ್ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ಜೆಸ್ಕಾಂ ಇಲಾಖೆ ಅಧಿಕಾರಿಗಳ ಜೊತೆಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು. ಪಡಿತರ ಚೀಟಿಗಳ ವಿತರಣೆಗೆ ಈ ಭಾಗದಲ್ಲಿ 10 ರೂಪಾಯಿಗಳನ್ನು ಲಂಚವಾಗಿ ಪಡೆಯುತ್ತಾರೆ ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ದೂರಿದರು. ಸಮಸ್ಯೆಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಪಡಿತರ ಪರವಾನಿಗೆ ರದ್ಧತಿ ಹಾಗೂ ಸಂಬಂಧಿಸಿದ ಪಡಿತರ ವಿತರಣೆದಾರರನ ಮೇಲೆ ಪ್ರಕರಣ ದಾಖಲಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಆಶ್ರಯ ಮನೆಗಳಿಗೆ ಗ್ರಾಪಂ ಸದಸ್ಯರು ಹಾಗೂ ಪಿಡಿಓ ಅವರು ಲಂಚ ಕೇಳುತ್ತಿದ್ದಾರೆ ಎಂದು ತುಗ್ಗಲಡೋಣಿ ಗ್ರಾಮಸ್ಥರು ಸಭೆಯಲ್ಲಿ ದೂರಿದರು. ತಹಸೀಲ್ದಾರ ಎಂ.ಸಿದ್ಧೇಶ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆಗೆ ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳುವಂತೆ ಹಾಗೂ ಸ್ಥಳೀಯ ಮಟ್ಟದ ಸಮಸ್ಯೆಗಳನ್ನು ಇಲ್ಲಿಯೇ ಬಗೆಹರಿಸಲಾಗುವುದು ಎಂದರು. ಎಸಿ ಬಸಟ್ಟೆಪ್ಪ ಹಾಗೂ ತಾಪಂ ಇಓ ಶಿವಪ್ಪ ಸುಭೇದಾರ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು. ಜಿಲ್ಲಾಮಟ್ಟದ ಹಾಗೂ ತಾಲೂಕಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಗ್ರಾಮ ಲೆಕ್ಕಾಧಿಕಾರಿ ಶರಣಪ್ಪ ಹುಡೇದ ಕಾರ್ಯಕ್ರಮ ನಿರೂಪಿಸಿದರು..!!